ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಯತ್ನಿಸಿದ ಸುಮಲತಾ ಅಂಬರೀಶ್ ಈಗ ಕಾರ್ಖಾನೆ ಆರಂಭ ನಾನು ಮಾಡಿಸಿದೆ ಅಂತ ಹೇಳುತ್ತಾ ನಾಟಕವಾಡುತ್ತಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದ ರಸ್ತೆಯ ಡಾಂಬರೀಕರಣ(60 ಲಕ್ಷ ವೆಚ್ಚದ) ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೈಷುಗರ್ ಕಾರ್ಖಾನೆ ವಿಷಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ನಾಟಕ ಆಡುವುದನ್ನು ಬಿಡಬೇಕು. ಮೈಷುಗರ್ ಕಾರ್ಖಾನೆಯನ್ನು ಓ ಅಂಡ್ ಎಂ ಮಾಡಿ ಎಂದು ಖಾಸಗಿ ವ್ಯಕ್ತಿಗೆ ಕೊಡಿಸಲು ಮುಂದಾಗಿದ್ದ ಸಂಸದರು ಈಗ ನಾಟಕ ಮಾಡಿದರೆ ಜಿಲ್ಲೆಯ ಜನರಿಗೆ ಗೊತ್ತಾಗಲ್ಲ ಎಂದು ತಿಳಿದಿದ್ದಾರೆ ಎಂದು ಟೀಕಿಸಿದರು.
ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಮತ್ತು ರೈತ ಮುಖಂಡರು ಹೋರಾಟ ಮಾಡಿ ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಬಾರದು, ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕು ಎಂದು ಒತ್ತಡ ಹಾಕಿದ್ದರಿಂದ ಸರ್ಕಾರ ಕಾರ್ಖಾನೆ ಆರಂಭಿಸಿದೆ ಎಂದರು.
ಸಂಸದೆ ಸುಮಲತಾ ಅವರು ಶೇ. 20 ರಷ್ಟು ರಾಜಕಾರಣ ಮಾಡಿದರೆ,ಶೇ.80 ರಷ್ಷು ಜನರ ಪರವಾಗಿರಬೇಕು.ಅದು ಬಿಟ್ಟು ನಾಟಕ ಮಾಡಿಕೊಂಡು ಸುಳ್ಳು ಹೇಳಬಾರದು ಎಂದರು.
ನೈತಿಕತೆ ಇಲ್ಲ
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಸುಮಲತಾ ಅಂಬರೀಶ್ ಅವರಿಗೆ ನೈತಿಕತೆಯಿಲ್ಲ.ಕುಟುಂಬ ರಾಜಕಾರಣ ಅಂದರೆ ಏನೆಂದು ಮೊದಲು ತಿಳಿದುಕೊಂಡು ಮಾತಾಡಲಿ.ಅಂಬರೀಶ್ ಅವರು ನಿಧನರಾದ ನಂತರ ಅವರೇಕೆ ಬಂದು ಚುನಾವಣೆಗೆ ನಿಂತರು.ಇದು ಕುಟುಂಬ ರಾಜಕಾರಣವಲ್ಲವೇ ಎಂದು ವ್ಯಂಗ್ಯವಾಡಿದರು.
ಕನ್ನಂಬಾಡಿ ಅಣೆಕಟ್ಟು ರಕ್ಷಣೆ ಕುರಿತು ಸರ್ಕಾರ ನಡೆಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸದೆ ಬೆಂಗಳೂರಿನಲ್ಲಿ ಕುಳಿತಿದ್ದರೂ,ದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದೆ ಎಂದು ಸುಳ್ಳು ಹೇಳಿದರು.
ಎಫ್ಐಆರ್ ಏಕಿಲ್ಲ
ಸುಮಲತಾ ಅಂಬರೀಶ್ ಅವರು ಕೃಷ್ಣರಾಜಸಾಗರ ಜಲಾಶಯದ ಮೇಲೆ ರಾಷ್ಟ್ರಧ್ವಜ ಹಾರಾಡಿಸಿ ಫೋಟೋಶೂಟ್ ಮಾಡಿರುವುದನ್ನು ನೋಡಿದ್ದೇನೆ. ಬೇರೆಯವರಾಗಿದ್ದರೆ ಇಷ್ಟೊತ್ತಿಗೆ ಅವರ ಮೇಲೆ ಎಫ್ಐಆರ್ ದಾಖಲಾಗುತ್ತಿತ್ತು. ಈ ದೇಶದಲ್ಲಿ ಕಾನೂನು ಬಡವರಿಗೂ, ಶಾಸಕರಿಗೂ,ಸಂಸದರಿಗೂ ಒಂದೇ. ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದರು.
ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿದು ಗ್ರಾಮಗಳು ಜಲಾವೃತವಾಗಿದ್ದರೂ ಜನರ ಸಂಕಷ್ಟ ಬಂದು ನೋಡಲಿಲ್ಲ.ಮಳೆ ನಿಂತು ವಾರದ ನಂತರ ಬಂದಿದ್ದನ್ನು ನೋಡಿದರೆ ಇವರಿಗೆ ಜನರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಎಂದು ಹರಿಹಾಯ್ದರು.
ಸ್ವಾತಂತ್ರ ಹೋರಾಟಗಾರರಿಗೆ ಅವಮಾನ
75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎರಡೂ ಪಕ್ಷಗಳು ಸ್ವಾತಂತ್ರ್ಯದ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡುತ್ತಾ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದ್ದಾರೆ.
ಗನ್ ಮ್ಯಾನ್ ಗಳಿಲ್ಲದೆ ಸ್ವತಂತ್ರವಾಗಿ ಓಡಾಡೋಕೆ ಯೋಗ್ಯತೆ ಇಲ್ಲದವರು, ಇಂದು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಸ್ವತಂತ್ರ ಬಂದು 75 ವರ್ಷ ಆಗಿದೆ ಇಂತಹ ಸಂದರ್ಭದಲ್ಲಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದರು.ಇವರೆಲ್ಲ ರಾಜಕಾರಣದ ಮೌಲ್ಯವನ್ನು ಕಳೆಯುತ್ತಿದ್ದಾರೆ ಸಾರ್ವಜನಿಕರಿಗೆ ಬಳಕೆಯಾಗುವ ಪೊಲೀಸರನ್ನು ಹಿಂದೆ-ಮುಂದೆ ಇಟ್ಟುಕೊಂಡು ಓಡಾಡುವ ಇವರಿಗೆ ನಾಚಿಕೆಯಾಗಬೇಕು ಎಂದು ಯಾವ ಪಕ್ಷದ ನಾಯಕರ ಹೆಸರೇಳದೆ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಲಿಂಗೇಗೌಡ, ಸಂಜೀವಯ್ಯ ತಿಮ್ಮೇಗೌಡ, ಕಿರಗಂದೂರು ಪ್ರದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು




