ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲೆಯ ಜೀವನಾಡಿಯಾದ ಮೈಸೂರು ಸಕ್ಕರೆ ಕಂಪನಿಯ ಬಾಯ್ಲಿಂಗ್ ಹೌಸ್ ಉನ್ನತೀಕರಣಕ್ಕೆ 60 ಕೋಟಿ ರೂ. ನೀಡಲು ಅನುಮೋದನೆ ನೀಡಿರುವುದು ಅಭಿನಂದನಾರ್ಹ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾಯ್ಲಿಂಗ್ ಹೌಸ್ ಉನ್ನತೀಕರಣಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಒತ್ತಾಯವಿತ್ತು, ಇದನ್ನು ಪರಿಗಣಿಸಿ ಸರ್ಕಾರ 60 ಕೋಟಿ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಏಪ್ರಿಲ್ ನಲ್ಲಿ ಉನ್ನತೀಕರಣ ಕಾಮಗಾರಿಯನ್ನು ಪ್ರಾರಂಭಿಸಿ ಆಗಸ್ಟ್ ವೇಳೆ ಕಾಮಗಾರಿ ಮುಗಿಸಲಾಗುವುದು. ಆದರೂ ಪರ್ಯಾರ ಬಾಯ್ಲರ್ ಬಳಕೆ ಮಾಡಿಕೊಂಡು ಜೂನ್ ನಲ್ಲಿಯೇ ಕಾರ್ಖಾನೆಯನ್ನು ಪ್ರಾರಂಭಿಸಲಾಗುವುದು ಎಂದು ವಿವರಿಸಿದರು.
ಮೈಷುಗರ್ ನಿರಂತರ ಆರ್ಥಿಕ ಶಕ್ತಿ
2023-24 ರಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಸತತವಾಗಿ ಮೈಷುಗರ್ ಕಾರ್ಖಾನೆಗೆ ಆರ್ಥಿಕ ಶಕ್ತಿಯನ್ನು ನೀಡುವುದರ ಮೂಲಕ ರೈತರ ಜೊತೆ ಅತ್ಯಂತ ಆತ್ಮೀಯವಾಗಿ ಸರ್ಕಾರವು ನಡೆದುಕೊಳ್ಳುತ್ತಿದ್ದೆ. 2023-24 ರಲ್ಲಿ ರೂ.50.00 ಕೋಟಿ ದುಡಿಯುವ ಬಂಡವಾಳವನ್ನು ನೀಡಿದ್ದು, ತದನಂತರ 2025-26 ರಲ್ಲಿ ಸಕ್ಕರೆ ಕಾರ್ಖಾನೆಗೆ ಮತ್ತೊಮ್ಮೆ ರೂ.10.00 ಕೋಟಿ ದುಡಿಯುವ ಬಂಡವಾಳವನ್ನು ನೀಡಿದ್ದು, ಮತ್ತೇ ಸುರ್ಧೀಘ ಕಾಲದಿಂದ ನೆನೆಗುದಿಗೆ ಬಿದಿದ್ದ ವಿದ್ಯುತ್ ಬಿಲ್ ರೂ.53.00 ಕೋಟಿ ಮನ್ನಾ ಮಾಡುವುದರ ಮೂಲಕ ಮೈಷುಗರ್ ಕಾರ್ಖಾನೆಗೆ ಅಪಾರವಾದ ಆರ್ಥಿಕ ಶಕ್ತಿಯನ್ನು ನಮ್ಮ ಸರ್ಕಾರ ನೀಡಿದೆ ಎಂದು ವಿವರಿಸಿದರು.
ಪ್ರಸ್ತುತ ಕ್ಯಾಬಿನೆಟ್ ಸಭೆಯ ತೀರ್ಮಾನದಂತೆ ಪೂರಕವಾಗಿ ಬಾಯ್ಲಿಂಗ್ ಹೌಸ್ ಅಳವಡಿಸಲು ರೂ.60.00 ಕೋಟಿ ನೀಡಿದ್ದು, ಒಟ್ಟು ರೂ.173.00 ಕೋಟಿಯನ್ನು ನೀಡಿ ಈ ಎರಡೂವರೆ ವರ್ಷಗಳಲ್ಲಿ ಅಪಾರವಾದ ಶಕ್ತಿಯನ್ನು ಮೈಷುಗರ್ ಕಾರ್ಖಾನೆಗೆ ನೀಡಿರುವುದನ್ನು ಮಂಡ್ಯ ಜಿಲ್ಲೆಯ ಎಲ್ಲಾ ಮೈಷುಗರ್ ಹಿತೈಷಿಗಳು, ಕಾಂಗ್ರೇಸ್ ಪಕ್ಷದ ಮುಂಖಡರುಗಳು ಪಕ್ಷತೀತವಾಗಿ ಎಲ್ಲರೂ ಕೂಡ ಅಭಿನಂದಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಈ ಹಿಂದೆ ಆಗಿರುವ ಸಣ್ಣ ಪುಟ್ಟ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಯಶಸ್ವಿಯಾಗಿ ಮೈಷುಗರ್ ಕಾರ್ಖಾನೆಯನ್ನು ನಡೆಸುವುದಕ್ಕೆ ನಮ್ಮ ಸರ್ಕಾರ ಹಾಗೂ ನಮ್ಮ ನಾಯಕರುಗಳು ಜವಾಬ್ದಾರರಾಗಿರುತ್ತಾರೆ ಎಂದ ಅವರು, ಬಹಳ ಮುಖ್ಯವಾಗಿ 2004 ರಲ್ಲಿ ಬಹಳ ಸಂಕಷ್ಟದಲ್ಲಿದ ಸಕ್ಕರೆ ಕಾರ್ಖಾನೆಯನ್ನು ಉಸ್ತುವಾರಿ ಸಚಿವರು ಆದ ಚಲುವರಾಯಸ್ವಾಮಿಯವರು ಹಾಗೂ ಅಂದಿನ ಮುಖ್ಯಮಂತ್ರಿಗಳಾದ ಧರಂಸಿಂಗ್ ಮತ್ತು ಉಪಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೋಟ್ಯಾಂತರ ರೂಪಾಯಿ ನೀಡಿ ಕಾರ್ಯಾರಂಭವಾಗುವಂತೆ ಮಾಡಿದರು ಎಂದು ಸ್ಮರಿಸಿದರು.
ಮೈಷುಗರ್ ಕಾರ್ಖಾನೆಗೆ ಹಲವು ಬಾರಿ ರೂ.50.00 ಕೋಟಿ, 10.00 ಕೋಟಿ, 53.00 ಕೋಟಿ ಹಾಗೂ ಪ್ರಸ್ತುತ 60.00 ಕೋಟಿಗಳನ್ನು ನೀಡುವುದಕ್ಕೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಶ್ರಮ ಅಪಾರವಾಗಿದೆ. ಇದಲ್ಲದೇ ಕೃಷಿ ವಿಶ್ವವಿದ್ಯಾನಿಲಯವನ್ನು ಅವರು ಮಂಡ್ಯ ಜಿಲ್ಲೆಗೆ ತಂದು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆಂದು ಹೇಳಿದರು.
ಸರ್ಕಾರದ ಆದೇಶದಂತೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಂಪನಿಯ ಹೆಚ್ಚುವರಿ ರೂ.50.00ಗಳನ್ನು ನೀಡಲು ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೋಹನ್ ಕುಮಾರ್ ದೇಶಹಳ್ಳಿ, ಅಜ್ಜಂಪುರ ರಾಮಕೃಷ್ಣ, ನಾಗರಾಜು, ನಹಿಂ, ಬೋರೇಗೌಡ, ಚಂದ್ರಶೇಖರ್, ಶ್ರೀಧರ್ ಹಾಗೂ ಚಂದಗಾಲು ವಿಜಯ್ ಕುಮಾರ್ ಉಪಸ್ಥಿತರಿದ್ದರು.




