Wednesday, October 23, 2024

ಪ್ರಾಯೋಗಿಕ ಆವೃತ್ತಿ

ಆರೋಪ ಮುಕ್ತರಾಗಿ ಜೀವನ ಸಾರ್ಥಕ ಪಡಿಸಿಕೊಳ್ಳಿ

ಯಾವ ವ್ಯಕ್ತಿಯೂ ಬೇಕೆಂದು ಅಪರಾಧ ಮಾಡೋದಿಲ್ಲ. ಸಮಯ,ಸಂದರ್ಭದ ಕಾರಣದಿಂದ ಆತ ಅಪರಾಧ ಮಾಡಿದ್ದು,ಆದ ತಪ್ಪನ್ನು ತಿದ್ದಿಕೊಂಡು ಆರೋಪ ಮುಕ್ತರಾಗಿ ಹೊರಬಂದು ಸಮಾಜದಲ್ಲಿ ಉತ್ತಮ ಜೀವನ ಮಾಡುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಜೆಡಿಎಸ್ ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ಸಲಹೆ ನೀಡಿದರು.

ಮಂಡ ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ತಂಬಾಕು ನಿಯಂತ್ರಣ ಕೋಶ,ಮಂಡ್ಯ ಬಂಧಿಖಾನೆ ಇಲಾಖೆ ಇವರ ಸಂಯುಕ್ತ ಅಶ್ರಯದಲ್ಲಿ,ಜೈಲಿನಲ್ಲಿರುವ ಆರೋಪಿಗಳಿಗೆ ಏರ್ಪಡಿಸಿದ್ದ ತಂಬಾಕು ನಿಯಂತ್ರಣ ಮತ್ತು ಕ್ಷಯ ರೋಗ ನಿರ್ಮೂಲನೆ ಜಾಗೃತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನುಷ್ಯ ಹುಟ್ಟಿದಾಗಿನಿಂದ ಯಾವ ತಪ್ಪು ಮಾಡುವುದಿಲ್ಲ. ಸಮಯ, ಸಂದರ್ಭದಲ್ಲಿ ಅಪರಾಧ ಎಸಗಿರುತ್ತಾನೆ.ಅದರಲ್ಲೂ ಮದ್ಯಪಾನದಿಂದ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ.

ಈ ನೆಲೆಯಲ್ಲಿ ನಾವು ದೊಡ್ಡ ತಪ್ಪು ಮಾಡಿದ್ದೇವೆ ಎಂದು ಭಾವಿಸುವುದು ಬೇಡ. ಮದ್ಯಪಾನ ಹಾಗೂ ಧೂಮಪಾನವನ್ನು ತ್ಯಜಿಸಿ,ಆರೋಪಮುಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಿಳಿಸಿದರು.

ಜೈಲಿನಿಂದ ಹೋದಂತಹ ವ್ಯಕ್ತಿಗಳು ದೊಡ್ಡ ವ್ಯಕ್ತಿಗಳಾಗಿ, ದೊಡ್ಡ ಉದ್ಯಮಿಗಳಾಗಿ, ಸಮಾಜ ಸುಧಾರಕರಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಯಾರು ಕೂಡ ಬೇಕೆಂದು ತಪ್ಪು ಮಾಡುವುದಿಲ್ಲ.ಕೆಲವು ಸಂದರ್ಭಗಳು ತಪ್ಪು ಮಾಡಿಸುವಂತೆ ಮಾಡುತ್ತವೆ. ಮದ್ಯಪಾನ, ಧೂಮಪಾನ ತ್ಯಜಿಸಿ ತಂಬಾಕು ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದರು.

ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕರವಾಗಿದ್ದು, ಎಲ್ಲರೂ ಮದ್ಯಪಾನ ತ್ಯಜಿಸಬೇಕು ಎಂದರು‌.

ಜೈಲಿನಲ್ಲಿರುವ ಆರೋಪಿಗಳು ಆದಷ್ಟು ಬೇಗ ಆರೋಪ ಮುಕ್ತರಾಗಿ, ದುಶ್ಚಟಗಳನ್ನು ತ್ಯಜಿಸಿ, ಸಮಾಜದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ,ಸಾಂಸ್ಕೃತಿಕವಾಗಿ ಬಾಳುವ ಮೂಲಕ ಜೀವನದ ಸಾರ್ಥಕತೆ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಾನು ನನ್ನ ಟ್ರಸ್ಟ್ ಮೂಲಕ ಕಾರಾಗೃಹದಲ್ಲಿ ಅವಶ್ಯಕತೆ ಇರುವವರಿಗೆ ನನ್ನ ಕೈಲಾದಷ್ಟು ಸೇವೆ ಮಾಡಲು ಬಯಸಿದ್ದೇನೆ. ಯಾವುದೇ ಕಾರಣಕ್ಕೂ ಮದ್ಯಪಾನ, ಧೂಮಪಾನ ಮಾಡಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರಾಗೃಹ ಸೂಪರಿಂಟೆಡೆಂಟ್ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಆರೋಗ್ಯ ಇಲಾಖೆ ಸಂಪನ್ಮೂಲ ವ್ಯಕ್ತಿ ತಿಮ್ಮರಾಜು ತಂಬಾಕಿನ ದುಷ್ಪರಿಣಾಮಗಳು ಮತ್ತು ನಿಯಂತ್ರಣದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜೈಲು ಅಧಿಕಾರಿಗಳು, ಅರೋಗ್ಯ ಇಲಾಖೆ ಅಧಿಕಾರಿಗಳು, ಕಾರಾಗೃಹ ಬಂಧಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!