Friday, September 20, 2024

ಪ್ರಾಯೋಗಿಕ ಆವೃತ್ತಿ

ಪೌಷ್ಟಿಕಾಂಶ ಕೊರತೆಯಾಗದಂತೆ ನೋಡಿಕೊಳ್ಳಿ: ನ್ಯಾ.ಓಂಕಾರ ಮೂರ್ತಿ

ಮಕ್ಕಳು ಹಾಗೂ ತಾಯಂದಿರು ಹಣ್ಣು, ತರಕಾರಿಗಳು, ಸೊಪ್ಪು ಸೇರಿದಂತೆ ಕಾಳುಗಳನ್ನು ಬಳಸುವ ಮೂಲಕ ಪೌಷ್ಟಿಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೆ.ಆರ್.ಪೇಟೆ ಜೆಎಂಎಫ್ ಸಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಓಂಕಾರಮೂರ್ತಿ ಮನವಿ ಮಾಡಿದರು.

ಕೃಷ್ಣರಾಜಪೇಟೆ ಪಟ್ಟಣದ ಪುರಸಭೆಯ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಶ್ರೀ ಕೋಟೆ ಭೈರವೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ತಾಲ್ಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವಪೌಷ್ಠಿಕ ಆಹಾರ ದಿನ ಹಾಗೂ ಪೋಷಣಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಮೃತ ಸಮಾನವಾದ ತಾಯಿಯ ಹಾಲನ್ನು ಮಕ್ಕಳಿಗೆ ನಿಯಮಿತವಾಗಿ ನೀಡುವ ಮೂಲಕ ಮಕ್ಕಳ ಆರೋಗ್ಯ ಸಂವರ್ಧನೆಗೆ ತಾಯಂದಿರು ಮುಂದಾಗಬೇಕು ಎಂದರು.

ಪ್ರಸ್ತುತ ಆಹಾರ ಪದ್ಧತಿಯಿಂದಾಗಿ ಮಕ್ಕಳು ಹಾಗೂ ತಾಯಂದಿರು ಪೌಷ್ಟಿಕಾಂಶದ ಕೊರತೆಯಿಂದಾಗಿ ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ತಾಯಂದಿರು ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಜೊತೆಗೆ ಮಕ್ಕಳಿಗೆ ಹಣ್ಣು, ತರಕಾರಿಗಳು, ಮೊಟ್ಟೆ, ಹಾಲು ಸೇರಿದಂತೆ ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ನೀಡಿ ಮಕ್ಕಳ ಅಕಾಲಿಕ ಸಾವನ್ನು ತಡೆಯಲು ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ವಕೀಲರಾದ ಬಂಡಿಹೊಳೆ ಗಣೇಶ್ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಭವ್ಯಭಾರತದ ಸತ್ಪ್ರಜೆಗಳಾದ್ದರಿಂದ ಮಕ್ಕಳ ಆರೋಗ್ಯ ಸಂವರ್ಧನೆಗೆ ಪೋಷಕರು ಮುಂದಾಗಬೇಕು. ಪೌಷ್ಟಿಕಾಂಶಗಳ ಆಹಾರದ ಕೊರತೆ ಹಾಗೂ ಹಸಿವಿನಿಂದ ಉಂಟಾಗುವ ಮಕ್ಕಳ ಸಾವಿನ ಪ್ರಮಾಣವನ್ನು ತಪ್ಪಿಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಮಾತನಾಡಿ, ಮೊಳಕೆ ಕಾಳುಗಳು ಸೇರಿದಂತೆ ಸೊಪ್ಪು, ತರಕಾರಿಯನ್ನು ತಾಯಂದಿರು ನಿಯಮಿತವಾಗಿ ಸೇವಿಸಬೇಕು. ಆಯಾ ಋತುಮಾನಗಳಲ್ಲಿ ದೊರೆಯುವ ಹಣ್ಣುಗಳನ್ನು ಸೇವಿಸುವ ಮೂಲಕ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತಹಶೀಲ್ದಾರ್ ಎಂ.ವಿ.ರೂಪ, ತಾಯಿ ಮತ್ತು ಮಕ್ಕಳ ಆರೋಗ್ಯ ಸಂವರ್ಧನೆಗೆ ಸರ್ಕಾರವು ಬದ್ಧವಾಗಿದೆ. ಅಂಗನವಾಡಿ ಕೇಂದ್ರದ ಮೂಲಕ ನೀಡುವ ಪೌಷ್ಟಿಕಾಂಶಗಳ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಆಶಾ, ಅಂಗನವಾಡಿ ಕಾರ್ಯಕರ್ತರ ಸೇವೆಯು ನಿರ್ಣಾಯಕವಾಗಿದೆ ಎಂದರು.

ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ, ಸಿಡಿಪಿಓ ಅರುಣಕುಮಾರ್, ತಾಲ್ಲೂಕು ಆಯುಷ್ ವೈದ್ಯಾಧಿಕಾರಿ ಡಾ.ಲೋಕೇಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪ್ರತಿಭಾ ಮಹಿಳಾ ಮಂಡಳಿಯ ಅಧ್ಯಕ್ಷೆ ಕೆ.ಮಂಜುಳಾ ಚನ್ನಕೇಶವ, ಸರ್ಕಾರಿ ಅಭಿಯೋಜಕ ರಾಜೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಪದ್ಮಾ, ಮಂಜುಳಾ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!