Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಸಂಸದೆ ಮತ್ತು ಶಾಸಕರ ಕಮಿಷನ್ ಜಟಾಪಟಿ

ಮಂಡ್ಯದಲ್ಲಿ ಕಮಿಷನ್ ದಂಧೆಯ ಆರೋಪ- ಪ್ರತ್ಯಾರೋಪ ಸಾಕಷ್ಟು ಜೋರಾಗಿಯೇ ಸದ್ದು ಮಾಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾಮಗಾರಿಗಳಲ್ಲಿ ಸ್ಥಳೀಯ ಶಾಸಕರು ಹಾಗೂ ಇನ್ನಿತರ ನಾಯಕರು ಕಮಿಷನ್ ಕೊಡಿ ಎಂದು ಪೀಡಿಸುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್ ಶಾಸಕರ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.

ಕಾಮಗಾರಿಗಳ ಟೆಂಡರ್ ಆಗುತ್ತಿದ್ದಂತೆ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಕಮಿಷನ್ ಕೇಳುತ್ತಾರೆ. ಕೊಡುವವರೆಗೂ ಕೆಲಸ ಮಾಡಲು ಬಿಡುವುದಿಲ್ಲ, ಕೇಂದ್ರದ ಅನುದಾನಕ್ಕೂ ಕೈ ಹಾಕಿದ್ದಾರೆ. ಹೀಗಾದರೆ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಲು ಹೇಗೆ ಸಾಧ್ಯ ಎಂದೆಲ್ಲ ಪರೋಕ್ಷವಾಗಿ ಜೆಡಿಎಸ್ ಶಾಸಕರ ಮೇಲೆ ಆರೋಪ ಮಾಡಿದ್ದಾರೆ.

ಗುತ್ತಿಗೆದಾರರೇ ನನ್ನ ಮುಂದೆ ಈ ಮಾಹಿತಿ ನೀಡಿದ್ದು, ಶಾಸಕರು ಹಾಗೂ ಜಿಲ್ಲೆಯ ಇತರೆ ನಾಯಕರ ಮುಂದೆ ಹೇಳುವುದಕ್ಕೆ ಹೆದರುತ್ತಿದ್ದಾರೆ. ಸಾರ್ವಜನಿಕರ ತೆರಿಗೆಯ ಹಣ ದುರ್ಬಳಕೆ ಆಗುತ್ತಿದೆ. ಎಂದೆಲ್ಲ ಆರೋಪ ಮಾಡಿದ್ದಾರೆ.

ಗಿಮಿಕ್ ಸಂಸದೆ
ಇದಕ್ಕೆ ಪ್ರತಿಯಾಗಿ ಜೆಡಿಎಸ್ ಶಾಸಕರಾದ ಸಿ.ಎಸ್. ಪುಟ್ಟರಾಜು ಸುರೇಶಗೌಡ, ರವೀಂದ್ರ ಶ್ರೀಕಂಠಯ್ಯ,ಡಿ.ಸಿ.ತಮ್ಮಣ್ಣ,ಅನ್ನದಾನಿ ತಿರುಗೇಟು ನೀಡಿದ್ದು, ಜಿಲ್ಲೆಯಲ್ಲಿ ಯಾರು ಕಮಿಷನ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಂಸದೆ ಸುಮಲತಾ ಅವರು ಬಹಿರಂಗಪಡಿಸಲಿ.

ದೂರು ಕೊಟ್ಟು ಸ್ಥಳೀಯ ಶಾಸಕರ ಮೇಲೆ ತನಿಖೆ ಮಾಡಿಸಲಿ,ಅದು ಬಿಟ್ಟು ಸುಳ್ಳು ಆರೋಪ ಮಾಡಿ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಗಿಮಿಕ್ ಮಾಡಬೇಡಿ.ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಯಲ್ಲಿ ಕಮೀಷನ್ ದಂಧೆ ಮಾಡಿದ್ದರೆ ಬಹಿರಂಗ ಪಡಿಸಲಿ. ಅದು ಬಿಟ್ಟು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದರೆ ಹೇಗೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದಾಖಲೆ ಇದೆ
ಅದರಲ್ಲೂ ಸಿ.ಎಸ್. ಪುಟ್ಟರಾಜು, ಸಂಸದೆ ಸುಮಲತಾ ಅಂಬರೀಶ್ ಅವರು ಎಲ್ಲೆಲ್ಲಿ ಕಮಿಷನ್ ಪಡೆದಿದ್ದಾರೆ ಎಂಬ ಬಗ್ಗೆ ನಮಗೂ ಗೊತ್ತಿದೆ. ಸೂಕ್ತ ಸಮಯದಲ್ಲಿ ದಾಖಲೆ ಬಿಚ್ಚಿಡುತ್ತೇನೆ ಎಂದಿದ್ದಾರೆ. ರವೀಂದ್ರ ಶ್ರೀಕಂಠಯ್ಯ ಕೂಡ ಸುಮಲತಾ ಅಂಬರೀಶ್ ರವರು ಬಹಿರಂಗ ಚರ್ಚೆಗೆ ಬರಲಿ, ಅವರ ಪತಿ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಅವರನ್ನು ಅವಧಿಗೂ ಮೊದಲೇ ಕೈಬಿಟ್ಟಿದ್ದು ಏಕೆ ಎಂಬುದನ್ನು ನಮಗೂ ಗೊತ್ತಿದೆ ಎಂದಿದ್ದಾರೆ. ಹೀಗೆ ಸಂಸದೆ ಮತ್ತು ಶಾಸಕರ ನಡುವಿನ ಕಮಿಷನ್ ದಂಧೆಯ ಜಟಾಪಟಿ ಜೋರಾಗಿ ನಡೆಯುತ್ತಿದೆ. ಸಂಸದೆ ಹಾಗೂ ಶಾಸಕರು ಹಿಟ್ ಅಂಡ್ ರನ್ ರೀತಿ ಪರಸ್ಪರ ಕೆಸರೆರಚುತ್ತಾ ಮಾತಾಡಿಕೊಂಡು ಓಡಾಡುತ್ತಿದ್ದಾರೆ ಎಂದಿದ್ದಾರೆ.

ಸಂಸದೆಗೆ ಭಯವೇ?
ಸಂಸದೆ ಸುಮಲತಾ ಅಂಬರೀಶ್ ರವರು ಕಮಿಷನ್ ದಂಧೆಯಲ್ಲಿ ಭಾಗಿಯಾಗಿರುವ ಶಾಸಕರು ಯಾರೆಂಬ ಬಗ್ಗೆ ಗೊತ್ತಿದ್ದರೂ ಸಾರ್ವಜನಿಕರ ಮುಂದೆ ಬಹಿರಂಗಪಡಿಸುವ ಬದಲು ಆರೋಪ ಮಾಡಿಕೊಂಡು ಓಡಾಡುತ್ತಿರುವುದು ಜನರ ಅನುಮಾನಕ್ಕೆ ಕಾರಣವಾಗಿದೆ. ಗುತ್ತಿಗೆದಾರರು ಶಾಸಕರ ಹೆಸರೇಳಲು ಭಯಪಡುತ್ತಾರೆ ಎಂದರೆ ಸುಮಲತಾ ಅವರಿಗೂ ಭಯವೇ? ಸಾರ್ವಜನಿಕರ ತೆರಿಗೆಯ ಹಣದಲ್ಲಿ ನಡೆಯುವ ಕಾಮಗಾರಿಗಳಲ್ಲೂ ಕಮಿಷನ್ ಪಡೆಯುತ್ತಾರೆಂದರೆ, ಅದರ ದುರ್ಬಳಕೆಯಾದಂತೆ ತಡೆಯಬೇಕಾದದ್ದು ಸಂಸದರ ಜವಾಬ್ದಾರಿಯಲ್ಲವೇ? ಅವರೇಕೆ ಭಯ ಪಡಬೇಕು.

ಬ್ಲಾಕ್ ಮೇಲ್ ತಂತ್ರ
ಹಾಗೆಯೇ ಶಾಸಕ ಸಿ. ಎಸ್. ಪುಟ್ಟರಾಜುರವರು ಸಂಸದೆ ಸುಮಲತಾ ಅವರ ಕಮಿಷನ್ ದಾಖಲೆಗಳು ನನ್ನ ಬಳಿಯಿದ್ದು, ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳುವ ಮೂಲಕ ಅವರ ಬಾಯಿ ಮುಚ್ಚಿಸಲು ಹೊರಟಿರುವುದು ಸರಿಯೇ?

ಸಂಸದರ ಕಮಿಷನ್ ಬಗ್ಗೆ ತಮ್ಮ ಬಳಿ ಯಾವ ದಾಖಲೆ ಇದೆ,ಅದನ್ನು ಸಾರ್ವಜನಿಕರಿಗೆ ತಿಳಿಸುವುದು ನಿಮ್ಮ ಕರ್ತವ್ಯವಲ್ಲವೇ? ಅದು ಬಿಟ್ಟು, ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪವನ್ನಷ್ಟೇ ಮಾಡುತ್ತಾ ಕೇವಲ ಬ್ಲಾಕ್ ಮೇಲ್ ತಂತ್ರ ಮಾಡುವುದು ಎಷ್ಟು ಸರಿ? ಸಾರ್ವಜನಿಕರ ಹಣ ಯಾವ ರೀತಿ ಲೂಟಿಯಾಗುತ್ತಿದೆ ಎಂಬ ಬಗ್ಗೆ ಸಂಸದರು ಮತ್ತು ಶಾಸಕರು ಇಬ್ಬರೂ ಜನರಿಗೆ ಸತ್ಯ ಹೇಳದೆ ಹೋದರೆ ನೀವೇ ಕಮಿಷನ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಜನ ನಿರ್ಧರಿಸುತ್ತಾರಲ್ಲವೇ?

ಇನ್ನಾದರೂ ಕಮಿಷನ್ ದಂಧೆಯ ಬಗ್ಗೆ ಸಂಸದರು ಹಾಗೂ ಶಾಸಕರು ಸಾರ್ವಜನಿಕರ ಮುಂದೆ ಸತ್ಯವನ್ನು ಬಹಿರಂಗ ಪಡಿಸಲಿ.ಇಲ್ಲದಿದ್ದರೆ ಜನಪ್ರತಿನಿಧಿಗಳೆಲ್ಲರೂ ಕಮಿಷನ್ ದಂಧೆಯ ಫಲಾನುಭವಿಗಳು ಎಂಬ ಸಾರ್ವತ್ರಿಕ ಅಭಿಪ್ರಾಯ ಸತ್ಯವಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!