ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಪಿಎಂ ಕಿಸಾನ್ ಯೋಜನೆಯ ಪಾಲಿಸಿ ಹಣ ನೀಡಿಲ್ಲ ಎಂದು ಆರೋಪಿಸಿ ವ್ಯವಸ್ಥಾಪಕರ ವಿರುದ್ದ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾ.ಪಂ ಮಾಜಿ ಅಧ್ಯಕ್ಷ ಸಂದೇಶ್ ನೇತೃತ್ವದಲ್ಲಿ ಗ್ರಾಮದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯ ವ್ಯವಸ್ಥಾಪಕರ ಕೊಠಡಿಯಲ್ಲಿ ಜಮಾಯಿಸಿ ವ್ಯವಸ್ಥಾಪಕ ಆನಂದ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಾಬುರಾಯನ ಕೊಪ್ಪಲು ಗ್ರಾಮದ ನಿವಾಸಿ ನಾರಾಯಣ್ ಎಂಬುವರ ಪತ್ನಿ ಸುಜಾತ (45) ಬರೋಡಾ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹರಿಸುತ್ತಿದ್ದರು. ಆಕಸ್ಮಿಕವಾಗಿ ಅವರು ಕಳೆದ ಒಂದೂವರೆ ವರ್ಷದ ಹಿಂದೆ ಮೃತರಾಗಿದ್ದು, ಪಿಎಂಕಿಸಾನ್ ಯೋಜನೆಯ ಪಾಲಿಸಿ ಹಣವನ್ನು ಪಡೆಯಲು ಕಳೆದ ಒಂದೂವರೆ ವರ್ಷದಿಂದ ಅರ್ಜಿ ಸಲ್ಲಿಸಿ ಅಲೆದಾಡುವ ಪರಿಸ್ಥಿತಿ ಉಂಟಾಗಿತ್ತು.
ಬ್ಯಾಂಕಿನಲ್ಲಿ ಹೊಸದಾಗಿ ಉಳಿತಾಯ ಖಾತೆ ತೆರೆಯುವ ಮುನ್ನ ಪ್ರತಿಯೊಬ್ಬರಿಗೆ ಪಿಎಂ ಕಿಸಾನ್ ಯೋಜನೆಗೆ 330 ರೂ ಹಣವನ್ನು ಬ್ಯಾಂಕಿನವರೆ ಪಾಲಿಸಿ ಮಾಡಿಕೊಂಡು ಗ್ರಾಹಕರ ಖಾತೆಯಿಂದಲೇ ಪಾಲಿಸಿಗೆ ಹಣ ಪಡೆದುಕೊಳ್ಳುವ ಈ ಯೋಜನೆಯಾಗಿತ್ತು. ಗ್ರಾಹಕರು ಮಧ್ಯಂತರದಲ್ಲಿ ಒಂದು ವೇಳೆ ಮೃತರಾದರೆ ಈ ಯೋಜನೆ ಉಪಯುಕ್ತವಾಗುತ್ತದೆ ಈ ಪಾಲಿಸಿಯಿಂದ ಎರಡು ಲಕ್ಷದವರೆಗೆ ಹಣ ಬರುತ್ತದೆ ಎಂದು ಈ ಯೋಜನೆಯಡಿ ಪಾಲಿಸಿ ಮಾಡಿಸಿದ್ದರು.
ಪಾಲಿಸಿದಾರ ಸುಜಾತ ಮೃತರಾದ ನಂತರ ಅವರ ಪಾಲಿಸಿ ಹಣವನ್ನು ಪತಿ ನಾರಾಯಣ್ ಅವರಿಗೆ ನೀಡದೆ ಬ್ಯಾಂಕಿಗೆ ಅಲೆದಾಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕೂಡಲೇ ಮೃತ ಕುಟುಂಬಕ್ಕೆ ಬರಬೇಕಿದ್ದ ಹಣ ನೀಡಬೇಕು . ಇಲ್ಲದಿದ್ದರೆ ಈ ಯೋಜನೆಯನ್ನು ಜಾರಿಗೆ ತಂದು ಅವರ ಖಾತೆಯಿಂದ ಹಣ ಪಡೆದುಕೊಂಡು ಗ್ರಾಹಕರಿಗೆ ವಂಚನೆ ಮಾಡುವ ಪ್ರತಿ ಬ್ಯಾಂಕ್ ಗಳ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸಂದೇಶ್ ಎಚ್ಚರಿಸಿದರು.
ಗ್ರಾಪಂ ಸದಸ್ಯ ಅರುಣ್ ಕುಮಾರ್, ಚಿಕ್ಕಲಿಂಗೇಗೌಡ, ವೇಣುಗೋಪಾಲ್, ಪುನೀತ್ ಕೆ.ಎಸ್. ಅಮಿತ್ ,ಡೈರಿ ರಾಘವೆಂದ್ರ, ಯಶವಂತ್, ಮಹದೇವು ಇತರರು ಉಪಸ್ಥಿತರಿದ್ದರು.