ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಬಹಳ ಉಪಯುಕ್ತವಾಗಿದೆ. ಆಗಾಗಿ ಯೋಗವನ್ನು ನಾವೆಲ್ಲರೂ ಅನುಸರಿಸೋಣ. ಯೋಗದಿಂದ ಬದುಕನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳೋಣ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಮತ್ತು ನೆಹರು ಯುವ ಕೇಂದ್ರ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಯೋಗ ನಡಿಗೆ ಎಂಬ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗ ಒಂದು ಮುನ್ನೆಲೆಗೆ ಬರಲಿ. ಯೋಗ ನಮ್ಮ ಜೀವನದ ಅಂಗವಾಗಲಿ ಯೋಗಾಭ್ಯಾಸದಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ಸಂದೇಶ ಸಾರುವ ಮೂಲ ಉದ್ದೇಶದಿಂದ ಯೋಗ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜೂನ್ 21 ರಂದು ಜಿಲ್ಲಾ ಮಟ್ಟದಿಂದ ಯೋಗ ದಿನಾಚರಣೆಯನ್ನು ಶ್ರೀರಂಗಪಟ್ಟಣದ ದೇವಸ್ಥಾನದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಯೋಗ ಬಂಧುಗಳು, ಸರ್ಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಸುಮಾರು 12 ರಿಂದ 13 ಸಾವಿರ ಸಾರ್ವಜನಿಕರನ್ನು ಒಳಗೊಂಡಂತೆ ಬೃಹತ್ ಮಟ್ಟದಲ್ಲಿ ಯೋಗಾಭ್ಯಾಸವನ್ನು ಮಾಡಲಾಗುತ್ತದೆ ಎಂದರು.
ಯೋಗಾಭ್ಯಾಸದ ಮೂಲಕ ನಮ್ಮ ಜೀವನವನ್ನು, ಆರೋಗ್ಯವಾಗಿ ಸಂರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ದೇಹಕ್ಕೆ ರೋಗಗಳು ಬಾರದ ರೀತಿ ಇರಲು ಯೋಗವು ಉತ್ತಮವಾದ ಔಷಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಅಧಿಕಾರಿ ಡಾ. ಪುಷ್ಪ, ಲೆಕ್ಕಾಧಿಕಾರಿ ಚಿಂದಗಿರಿಗೌಡ, ನಿವೃತ್ತ ಲೆಕ್ಕಾಧಿಕಾರಿ ಬಸವರಾಜು, ಅನುಪಮ ಯೋಗ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.