- ರಸಗೊಬ್ಬರ ಅಕ್ರಮ ದಾಸ್ತಾನು ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ
- ಐಪಿಸಿ ಸೆಕ್ಷನ್ 341, 323, 504, 506, 34 ಆಡಿ ಪ್ರಕರಣ ದಾಖಲು
ರಸಗೊಬ್ಬರ ಅಕ್ರಮ ದಾಸ್ತಾನು ಮತ್ತು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅವರಿಗೆ ಡೀಲರ್‌ಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರು ತಾಲೂಕಿನ ಹೊಸೂರು ಸರ್ಕಲ್‌ನಲ್ಲಿರುವ ಮೇಘ ಟ್ರೇಡರ್ಸ್ ಮೈನ್ ರಸಗೊಬ್ಬರದ ಅಂಗಡಿಯಲ್ಲಿ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕೇರಳಕ್ಕೆ ಸಾಗಿಸಲಾಗುತ್ತಿದೆ. ಸ್ಥಳೀಯ ರೈತರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ರಸಗೊಬ್ಬರ ಅಂಗಡಿ ಮಾಲೀಕ (ಡೀಲರ್) ರಾಮಕೃಷ್ಣ ಆಲಿಯಾಸ್ ಅಣ್ಣೇಗೌಡ ಎಂಬವರನ್ನು ಅವ್ಯವಹಾರದ ಕುರಿತು ಕುಮಾರ್ ಅವರು ಪ್ರಶ್ನಿಸಿದ್ದಾರೆ.
ಅವ್ಯವಹಾರಗಳ ಬಗ್ಗೆ ಪ್ರಶ್ನಿಸಿದ್ದರಿಂದ ಉದ್ವೇಗಗೊಂಡ ರಸಗೊಬ್ಬರ ಡೀಲರ್ ರಾಮಕೃಷ್ಣ ಮತ್ತು ಆತನ ಮಗ ಧನುಷ್, ಕೆಲಸಗಾರ ನಾಗನಹಳ್ಳಿ ಗಿರೀಶ್ ಎಂಬವರು ಕುಮಾರ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ.
ಅಂಗಡಿ ಮಾಲೀಕರು ಮತ್ತು ಕೆಲಸಗಾರರ ವಿರುದ್ಧ ಕುಮಾರ್ ಅವರು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 341, 323, 504, 506, 34 ಆಡಿ ಪ್ರಕರಣ ದಾಖಲಾಗಿದೆ.
“ಮೈಸೂರು ಜಿಲ್ಲೆಯಲ್ಲಿ ರಸಗೊಬ್ಬರದ ಅಭಾವ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಡೀಲರ್‌ಗಳು ರಾಜ್ಯದ ರೈತರಿಗೆ ಸಲ್ಲಬೇಕಾದ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ, ಕೇರಳಕ್ಕೆ ರಫ್ತು ಮಾಡುತ್ತಿದ್ದಾರೆ. 275 ರೂಪಾಯಿಗೆ ಮಾರಾಟ ಮಾಡಬೇಕಿರುವ ಗೊಬ್ಬರವನ್ನು ಮೇಘ ಟ್ರೇಡರ್ಸ್‌ನಲ್ಲಿ 350 ರಿಂದ 480 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಕೀಟನಾಶಕಗಳನ್ನು ಅಗತ್ಯ ಇಲ್ಲದಿದ್ದರೂ ಕಡ್ಡಾಯವಾಗಿ ಕೊಳ್ಳಲೇಬೇಕೆಂದು ಒತ್ತಾಯ ಹಾಕುತ್ತಿದ್ದಾರೆ” ಎಂದು ಹೊಸೂರು ಕುಮಾರ್ ಆರೋಪಿಸಿದ್ದಾರೆ.
“ರಸಗೊಬ್ಬರದ ಅಂಗಡಿ ಮಾಲೀಕರು ಕೊಲೆ ಬೆದರಿಕೆ ಹಾಕಿದ ಸಮಯದಲ್ಲಿ ಕುರುಬರಹಳ್ಳಿ ಗ್ರಾಮದ ಗೋವಿಂದ, ಹೊಸೂರು ಕೊಡಗು ಕಾಲೋನಿಯ ಪ್ರಸನ್ನ ತಮ್ಮ ಜೊತೆಯಲ್ಲಿದ್ದರು” ಎಂದು ಕುಮಾರ್ ಹೇಳಿದ್ದಾರೆ.
ದೂರು ದಾಖಲಿಸುವ ಸಮಯದಲ್ಲಿ ರೈತ ಸಂಘದ ಹಿರಿಯ ಮುಖಂಡ ಅಪ್ಪಣ್ಣ, ಮಹದೇವು ಜೆ,ರಾಜು ಚಿಕ್ಕ ಹುಣಸೂರು, ಬಸವರಾಜ್, ಬೆಂಕಿಪುರ ಚಿಕ್ಕಣ್ಣ, ಪ್ರಕಾಶ್, ಸಿದ್ದೇಶ್, ಡೇವಿಡ್ ಸೇರಿದಂತೆ ಹಲವರು ಇದ್ದರು.




