- ಜಿಂಕೆ ಮಾಂಸ ಮಾರಾಟ ಆರೋಪದಡಿ ಬಂಧಿಸಿದ್ದ ಅರಣ್ಯಾಧಿಕಾರಿಗಳು
- ಮೂರು ದಿನಗಳಿಂದ ಕಸ್ಟಡಿಯಲ್ಲಿ ಕಿರುಕುಳ ನೀಡಿದ್ದ ಆರೋಪ
ಜಿಂಕೆ ಮಾಂಸ ಮಾರಾಟ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಜೇನು ಕುರುಬ ಸಮುದಾಯದ ವ್ಯಕ್ತಿ ಅರಣ್ಯಾಧಿಕಾರಿ ಕಸ್ಟಡಿಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟಿ ತಾಲೂಕಿನಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಎನ್ ಬೇಗೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಸಾವು ಸಂಭವಿಸಿದೆ. ಜೇನು ಕುರುಬ ಸಮುದಾಯದ ಕರಿಯಪ್ಪ (41) ಮೃತರು. ಅವರ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಇದು ಲಾಕಪ್ ಡೆತ್ ಎಂದು ಆರೋಪಿಸಲಾಗಿದೆ.
ಹೊಸಳ್ಳಿ ಹಾಡಿಯ ನಿವಾಸಿಯಾಗಿರುವ ಕರಿಯಪ್ಪ ಅವರನ್ನು ಮೂರು ದಿನಗಳ ಹಿಂದೆ ಜಿಂಕೆ ಮಾಂಸ ಮಾರಾಟದ ಆರೋಪದಲ್ಲಿ ಅರಣ್ಯಾಧಿಕಾರಿಗಳು ಬಂಧಿಸಿದ್ದರು. ಕರಿಯಪ್ಪ ಅವರನ್ನು ಅರಣ್ಯ ವಲಯ ಅಧಿಕಾರಿಗಳ ಕಚೇರಿಗೆ ತಂದು ಸತತವಾಗಿ ಮೂರು ದಿನಗಳಿಂದ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳವಾರ ರಾತ್ರಿ ವೇಳೆಯಲ್ಲಿ ಕರಿಯಪ್ಪ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ತಕ್ಷಣವೇ ಅರಣ್ಯಾಧಿಕಾರಿಗಳು ಅವರನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಲ್ಲಿ ಅವರು ಮೃತಪಟ್ಟಿದ್ದಾರೆ. ಅರಣ್ಯಾಧಿಕಾರಿಗಳು ಹೊಡೆದು ಸಾಯಿಸಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹೊಸಳ್ಳಿ ಹಾಡಿ ಭಾಗದಲ್ಲಿ ಇಬ್ಬರು ಯುವಕರನ್ನು ಜಿಂಕೆ ಮಾಂಸ ಮಾರಾಟದ ಆರೋಪದಲ್ಲಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಯುವಕರು ತಮಗೆ ಜಿಂಕೆ ಮಾಂಸವನ್ನು ಕರಿಯಪ್ಪ ಕೊಟ್ಟಿದ್ದಾಗಿ ಹೇಳಿದ್ದರು ಎಂದು ಕಬಿನಿ ಶಿವಲಿಂಗ ಮಾಹಿತಿ ನೀಡಿದ್ದಾರೆ.
ಕರಿಯಪ್ಪ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಹಗಲಲ್ಲಿ ಕೂಲಿ ಕೆಲಸಕ್ಕೆಂದು ಹಾಡಿಯಿಂದ ಹೊರಗೆ ಬಂದರೂ ಸಂಜೆ ಹಾಡಿಗೆ ಮರಳುತ್ತಿದ್ದರು. ಅವರೇ ಜಿಂಕೆ ಮಾಂಸ ಒದಗಿಸಿದ್ದು ಎಂದು ಹೇಳಿದ್ದರಿಂದ ಅರಣ್ಯಾಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು.
ಮೂರು ದಿನಗಳಿಂದ ಅರಣ್ಯಾಧಿಕಾರಿ ಕಚೇರಿಯಲ್ಲೇ ಇಟ್ಟುಕೊಂಡು ಹಿಂಸೆ ನೀಡಲಾಗಿದೆ. ಅವರನ್ನು ಹೊಡೆದು ಸಾಯಿಸಲಾಗಿದೆ ಎಂದು ಮನೆಯವರು ಆರೋಪಿಸಿದ್ದಾರೆ.
ಕರಿಯಪ್ಪ ಅವರ ತಲೆಗೆ ಏಟು ಬಿದ್ದಿದ್ದು, ಇದರಿಂದಾಗಿ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಶವವನ್ನು ಹಸ್ತಾಂತರ ಮಾಡಲಾಗಿದೆ.
ಇದೀಗ ಗ್ರಾಮಸ್ಥರು ಮತ್ತು ಕುಟುಂಬಿಕರು ಶವವನ್ನು ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಅರಣ್ಯ ಅಧಿಕಾರಿ ಬಂಧನಕ್ಕೆ ಆಗ್ರಹ
ಜನಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಮಾತನಾಡಿ, “ಜಿಂಕೆ ಮಾಂಸ ಮಾರಾಟದ ಆರೋಪದಡಿ ಜೇನು ಕುರುಬ ಸಮುದಾಯದ ಕರಿಯಪ್ಪ ಅವರನ್ನು ಕಸ್ಟಡಿಗೆ ಪಡೆದು ದೈಹಿಕವಾಗಿ ಹಿಂಸೆ ನೀಡಿದ್ದಾರೆ.
ಅದಕ್ಕೆ ಅವರ ದೇಹದ ಮೇಲೆ ಆಗಿರುವ ಗಾಯಗಳೇ ಸಾಕ್ಷಿ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಹಾಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಗಳನ್ನು ಕೂಡಲೆ ಬಂಧಿಸಿ ಜೈಲಿಗೆ ಕಳುಹಿಸಬೇಕು. ಉದ್ಯೋಗ ಕೊಡಿಸುತ್ತೆವೆ, ಸ್ವಲ್ಪ ಹಣ ಕೊಡುತ್ತೇವೆ ದೂರು ಕೊಡುವುದು ಬೇಡ ಎಂದು ನಿನ್ನೆ ಕೆಲವರು ಮಧ್ಯಸ್ಥಿಕೆವಹಿಸಿ ರಾಜಿ ಮಾಡಲು ಪ್ರಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ” ಎಂದು ಆರೋಪಿಸಿದರು.




