Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯ ಬಜೆಟ್| ಮಂಡ್ಯಕ್ಕೆ ಹೊಸ ಸಕ್ಕರೆ ಕಾರ್ಖಾನೆ ಘೋಷಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಬಜೆಟ್ ಮಂಡಿಸಿದ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯಕ್ಕೆ ಹೊಸ ಸಕ್ಕರೆ ಕಾರ್ಖಾನೆ ಘೋಷಣೆ ಮಾಡಿದ್ದಾರೆ.

ಮಂಡ್ಯದ ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಲಾಗುವುದು. ಸರ್ಕಾರದ ಅನುದಾನ, ಕಾರ್ಖಾನೆಯ ಸಂಪತ್ತುಗಳಿಂದ ಹಣ ಕ್ರೋಢೀಕರಿಸಿ, ಕಾರ್ಖಾನೆ ನಿರ್ಮಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಿಸುವ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕಾವೇರಿ ನೀರಾವರಿ ನಿಗಮದಡಿ ವಿಶ್ವೇಶ್ವರಯ್ಯ ನಾಲಾ ಜಾಲದ ಹೆಬ್ಬಕವಾಡಿ, ನಿಡಘಟ್ಟ, ತುರುಗನೂರು, ಮಳವಳ್ಳಿ ತಾಲ್ಲೂಕಿನ ಮಾದವ ಮಂತ್ರಿ ನಾಲೆಗಳ ಹಾಗೂ ಮದ್ದೂರು ತಾಲ್ಲೂಕು ಕೆಮ್ಮಣ್ಣುನಾಲಾ ಆಧುನೀಕರಣ ಮಾಡಲಾಗುವುದೆಂದು ಘೋಷಿಸಿದ್ದಾರೆ.

ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು. ರಾಜ್ಯದಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ 15 ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಉಡುಪಿ, ದಾವಣಗೆರೆ, ವಿಜಯಪುರ, ಮೈಸೂರು, ಮಂಡ್ಯ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 187 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಮತ್ತು ನಿರಂತರ ಅನುಸರಣೆಗಾಗಿ ಬಹುತೇಕ ಜಿಲ್ಲೆಗಳಲ್ಲಿ Chemotherapy ಚಿಕಿತ್ಸಾ ಕೇಂದ್ರಗಳು ಲಭ್ಯವಿರದ ಕಾರಣ, ಸರ್ಕಾರವು 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ-ಕೇರ್ ಕಿಮೋಥೆರಪಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ಮುಂದಿನ 4 ವರ್ಷಗಳಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯವನ್ನು (IPHL) ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆಗಳನ್ನು ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಚಿಕ್ಕಮಗಳೂರು, ವಿಜಯನಗರ, ಶಿವಮೊಗ್ಗ, ಬೆಳಗಾವಿ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಸೇವೆ ಒದಗಿಸಲಾಗುವುದು ಎಂದು ವಿವರಿಸಿದ್ದಾರೆ.

ಬೆಂಗಳೂರು-ಮಂಡ್ಯ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೈಸೂರು ಹೊರವಲಯದಲ್ಲಿರುವ ಜಂಕ್ಷನ್ನಲ್ಲಿ ವಾಹನ ಸಂಚಾರ ದಟ್ಟಣೆಯನ್ನು ನೀಗಿಸಲು ಎನ್.ಹೆಚ್.ಎ.ಐ ಸಹಯೋಗದೊಂದಿಗೆ ಮೇಲುಸೇತುವೆ ನಿರ್ಮಾಣ ಮಾಡಲಾಗುವುದು ಹಾಗೂ ಆದಿಚುಂಚನಗಿರಿಯಲ್ಲಿ ಪ್ರಗತಿಯಲ್ಲಿರುವ ವಿಜ್ಞಾನ ಕೇಂದ್ರ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!