Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೆಚ್.ಡಿ.ಕುಮಾರಸ್ವಾಮಿಗೆ 2,84,620 ಮತಗಳ ಅಂತರ ದಾಖಲೆಯ ಗೆಲುವು

ರಾಜಕೀಯ ‘ಪ್ರಜ್ಞಾವಂತಿಕೆ’ಯ ನೆಲವೆಂಬ ಖ್ಯಾತಿಗೆ ಪಾತ್ರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 2,84,620 ಮತಗಳ ಅಂತರದಿಂದ ಭರ್ಜರಿ ಬಹುಮತದೊಂದಿಗೆ ಗೆಲವು ಸಾಧಿಸಿ ಎರಡನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ.

ಕಳೆದ ಏ.26ರಂದು ಜರುಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ 7 ಹಾಗೂ ನೆರೆಯ ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯನಗರದ ವಿಶ್ವವಿದ್ಯಾನಿಲಯದ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಮತ ಎಣಿಕೆಯ ಪ್ರಥಮ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರು ಅಂತಿಮ ಹಂತದ 20ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ತಮ್ಮ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೇಗೌಡ ವಿರುದ್ದ 2,84,620 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಬಹುಮತ ಪಡೆದ 2ನೇ ಅಭ್ಯರ್ಥಿಯಾಗಿ 18ನೇ ಲೋಕಸಭೆಗೆ ಆಯ್ಕೆಯಾದ ಕೀರ್ತಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ.

ರಾಜ್ಯದ ಹೈವೋಲ್ಟೆಜ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಆಡಳಿತರೂಢ ಕಾಂಗ್ರೆಸ್ ಶಾಸಕರಿದ್ದು, ಮೂವರು ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.

ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮಂಡ್ಯ ವಿಧಾನ ಕ್ಷೇತ್ರದಲ್ಲಿ 1,05,253, ಮದ್ದೂರು-1,15,671, ಮಳವಳ್ಳಿ-99,567, ಶ್ರೀರಂಗಪಟ್ಟಣ- 1,13,843, ಮೇಲುಕೋಟೆ-1,10,896, ಕೆ.ಆರ್.ಪೇಟೆ-1,00,170, ನಾಗಮಂಗಲ-1,13,058, ಕೆ.ಆರ್.ನಗರದಲ್ಲಿ 88,995 ಮತಗಳು ಹಾಗೂ 4,399 ಅಂಚೆ ಮತಗಳನ್ನು ಗಳಿಸಿ ಒಟ್ಟಾರೆ 8,51,881 ಮತಗಳನ್ನು ಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೇಗೌಡ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 67,033, ಮದ್ದೂರು-58,893, ಮಳವಳ್ಳಿ-90,212, ಶ್ರೀರಂಗಪಟ್ಟಣ 65,254, ಮೇಲುಕೋಟೆ 61,014, ಕೆ.ಆರ್.ಪೇಟೆ- 73,648, ನಾಗಮಂಗಲ- 66,576, ಕೆ.ಆರ್.ನಗರ-82,148 ಮತಗಳು ಹಾಗೂ 2483 ಅಂಚೆ ಮತಗಳನ್ನು ಪಡೆದು ಒಟ್ಟಾರೆ 5,67,261 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ