Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಸಂಘ ಪರಿವಾರದ ಸಖ್ಯ : ಪೀಠ ತೊರೆಯುವಂತೆ ಮಾದಿಗ ಸಮುದಾಯದ ಆಗ್ರಹ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವ  ಮೊದನಿಂದಲೂ ಬುದ್ಧ, ಬಸವ ಮಾರ್ಗಕ್ಕೆ, ಬಾಬಾ ಸಾಹೇಬರ ಚಿಂತನೆಗಳಿಗೆ ವಿರೋಧವಾಗಿಯೂ, ಸಂಘ ಪರಿವಾರದ ಬಾಲಂಗೋಚಿಯಾಗಿಯೂ ನಡೆದುಕೊಂಡಿರುವ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಯವರು ಪೀಠ ತ್ಯಜಿಸಬೇಕೇಂದು ಮಾದಿಗ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ 400 ಸೀಟ್ ಗೆದ್ದರೆ ಸಂವಿಧಾನ ಬದಲಿಸುವ ಮುಕ್ತ ಅಜೆಂಡಾ ಹೊಂದಿದ್ದ ಬಿಜೆಪಿ, ಸಂಘಪರಿವಾರವನ್ನು ಈ ದೇಶದ ಸಮಸ್ತ ದಲಿತ ಸಮುದಾಯ ಬಲವಾಗಿ ವಿರೋಧಿಸಿದ ಕಾರಣ, ಬಿಜೆಪಿ ಬಹುಮತ ಕಳೆದುಕೊಂಡಿತು. ಆನಂತರ ಗಾಬರಿಗೊಂಡಿರುವ ಸಂಘಪರಿವಾರವು ಹಿಂಬಾಗಿನಿಂದ ಬಂದು ದಲಿತ ಸಮುದಾಯವನ್ನು ಒಡೆದು ಆಳುವ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾಗಿದೆ. ಅದರ ಭಾಗವಾಗಿ ‘ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್’ ಎಂಬ ವೇದಿಕೆ ರೂಪಿಸಿಕೊಂಡು ‘ಸಂವಿಧಾನ ಸನ್ಮಾನ’ ಎಂಬ ಹೆಸರಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಮಾದರ ಚೆನ್ನಯ್ಯ ಸ್ವಾಮೀಜಿ ಪೀಠ ತ್ಯಜಿಸಬೇಕೆಂದು ಪ್ರಗತಿಪರ ಚಿಂತಕರಾದ ಸಿ.ಕೆ.ಮಹೇಶ್, ಡಾ.ವಡ್ಡಗೆರೆ ನಾಗರಾಜಯ್ಯ, ಪ್ರೊ.ಹರಿರಾಮ್, ಭಾಸ್ಕರ್ ಪ್ರಸಾದ್, ವಕೀಲ ಹನುಮೇಶ್ ಗುಂಡೂರು ಹಾಗೂ ಬರಹಗಾರ ಯತೀರಾಜ್ ಬ್ಯಾಲಹಳ್ಳಿ ಆಗ್ರಹಿಸಿದ್ದಾರೆ.

ಆರ್.ಎಸ್.ಎಸ್ ಅಪಪ್ರಚಾರ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಅರ್ಧಸತ್ಯಗಳನ್ನು, ಹಸಿಹಸಿ ಸುಳ್ಳುಗಳ ಕಥೆ ಕಟ್ಟಿ ಅಪಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ಆರ್.ಎಸ್.ಎಸ್. ರೂಪಿಸುತ್ತಿದೆ. ಇದಕ್ಕೆ ಮಾದಿಗ ಸಮುದಾಯದ ಮಾದಾರ ಚನ್ನಯ್ಯ ಸ್ವಾಮೀಜಿಯನ್ನು ಮುಂದೆ ಬಿಟ್ಟು, ಮಾದಿಗ ಸಮುದಾಯ ಇಂತಹ ಪಿತೂರಿ ಕೃತ್ಯದ ಭಾಗವೆಂಬಂತೆ ಚಿತ್ರಿಸಲಾಗುತ್ತಿದೆ. ಈ ಸ್ವಾಮೀಜಿ ಸಮುದಾಯದ ಪ್ರತಿನಿಧಿಯೂ ಅಲ್ಲ, ಸಮುದಾಯದ ನೋವು- ನಲಿವು, ಒಲವು- ನಿಲುವುಗಳೂ ಅವರಿಗೆ ತಿಳಿದಿಲ್ಲ. ಮಾದಾರ ಚನ್ನಯ್ಯನವರ ಪೀಠದಲ್ಲಿ ಕೂತ ಮಾತ್ರಕ್ಕೆ ಅವರು ಸಮುದಾಯದ ಸಾಕ್ಷಿಪ್ರಜ್ಞೆಯಾಗುವುದಿಲ್ಲ ಎಂದು ಮುಖಂಡರು ಕಿಡಿಕಾರಿದ್ದಾರೆ.

ಕಾವಿ ಕಳಚಿ ಬಿಜೆಪಿ ಸೇರಲಿ

ಬಿಜೆಪಿ, ಸಂಘಪರಿವಾರ ಹೇಳಿದಂತೆ ಕುಣಿಯುತ್ತಿರುವ ಸ್ವಾಮೀಜಿಯವರು ಕಾವಿ ಕಳಚಿ, ಬಿಜೆಪಿಯನ್ನೋ, ಆರ್.ಎಸ್.ಎಸ್ ಸಂಸ್ಥೆಯನ್ನೋ ಸೇರಿಕೊಂಡು ಅವರು ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಿದರೆ ನಮ್ಮದೇನೂ ತಕರಾರು ಇಲ್ಲ. ಸ್ವಾಮೀಜಿಯವರು ಮೊದಲಿನಿಂದಲೂ ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷ ಕಟ್ಟುವಲ್ಲಿ ಮುಂಚೂಣಿಯಲ್ಲಿರುವ ಕಾರಣ, ಅವರು ಪೀಠ ತೊರೆದು ತಾವು ಬಿಜೆಪಿಯ ಬಾಲಂಗೋಚಿ ಎಂಬುದನ್ನು ಅವರು ಸಾಬೀತು ಮಾಡಬೇಕು. ಆರ್‌.ಎಸ್.ಎಸ್.ನ ಸರಸಂಘಚಾಲಕ ಹುದ್ದೆಯನ್ನೋ, ಬಿಜೆಪಿಯ ರಾಜ್ಯಾಧ್ಯಕ್ಷವನ್ನೋ ಕೊಟ್ಟರೆ ನಿಭಾಯಿಸಲು ಸ್ವಾಮೀಜಿ ಯೋಗ್ಯವಾಗಿದ್ದಾರೆ. ಒಟ್ಟಾರೆ ಸ್ವಾಮೀಜಿ ಪೀಠ ತೊರೆಯುವವರೆಗೂ ಸಮುದಾಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

‘ಸಂವಿಧಾನದಲ್ಲಿ ಮನುಸ್ಮೃತಿ ಇಲ್ಲ’, ‘ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಸಹಕರಿಸುವುದೆಂದರೆ ಹಾವಿಗೆ ಹಾಲೆರೆದಂತೆ’ ಎಂದಿದ್ದ ಆರ್.ಎಸ್.ಎಸ್. ಕೂಟವು ಈ ಹಿಂದೆ ‘ಮಾದಿಗ ಮುನ್ನಡೆ’ ಎಂಬ ಕಾರ್ಯಕ್ರಮ ನಡೆಸಿತ್ತು. ಆ ಮೂಲಕ ‘ಮನುವಾದ ಮುನ್ನಡೆ’ ಮಾಡುವ ಪಿತೂರಿ ನಡೆದಿತ್ತು.‌ ಅದಕ್ಕೂ ಈ ಮಾದಾರ ಚನ್ನಯ್ಯ ಸ್ವಾಮೀಜಿಯವರನ್ನು ಮುಂದೆ ಬಿಡಲಾಗಿತ್ತು. ಸಮುದಾಯ ಎಚ್ಚೆತ್ತುಕೊಂಡು ಪ್ರಶ್ನೆ ಮಾಡಿದಾಗ ತಣ್ಣಗಾಗಿದ್ದರು. ಮಾದಿಗರನ್ನು ಒಂದು ಪಕ್ಷದ, ಮತೀಯವಾದಿ ಸಿದ್ಧಾಂತ ಹೊಂದಿರುವ ಸಂಘಪರಿವಾರದ ಅಡಿಯಾಳುಗಳನ್ನಾಗಿ ಮಾಡುವ ದುಷ್ಕೃತ್ಯಗಳಿಗೆ ಸ್ವಾಮೀಜಿ ಮುಂದಾಗಿದ್ದಾರೆ. ಸ್ವಾಮೀಜಿಯವರು ಪೀಠವನ್ನು ತೊರೆದು ತಾವು ಬಿಜೆಪಿ ಹೇಳಿದಂತೆ ಕುಣಿಯುವ ರಾಜಕಾರಣಿ ಎಂದು ಸಾಬೀತು ಮಾಡಲಿ. ಸಮುದಾಯವನ್ನು ದಿಕ್ಕು ತಪ್ಪಿಸುವ ಈ ಪ್ರವೃತ್ತಿ ಮುಂದುವರಿದರೆ ಸಮುದಾಯ ಸುಮ್ಮನಿರುವುದಿಲ್ಲ ಎಂದು  ಮಾದಿಗ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ