Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭೆ| ಮತ ಎಣಿಕೆಯಲ್ಲಿ ಲೋಪ- ಮೋಸ ನಡೆಯದಂತೆ ಎಚ್ಚರವಹಿಸಲು ಮನವಿ

ಬರುವ ಜೂ.4ರಂದು ಮಂಡ್ಯ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಆ ಸಂದರ್ಭದಲ್ಲಿ ಯಾವುದೇ ಲೋಪ, ವಂಚನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ವಿವಿಧ ಪ್ರಗತಿಪರ ಸಂಘಟನೆಗಳು ಬುಧವಾರ ಮನವಿ ಸಲ್ಲಿಸಿದವು.

ಪ್ರಗತಿಪರ ಮುಖಂಡರಾದ ಪ್ರೊ.ಹುಲ್ಕೆರೆ ಮಹದೇವು, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಲತಾ ಶಂಕರ್, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಸೇರಿದಂತೆ ಹಲವರು ಮನವಿ ಸಲ್ಲಿಸಿದರು.

ಈ ಚುನಾವಣೆಯಲ್ಲಿ ಆಳುವ ಪಕ್ಷವು ಚುನಾವಣಾ ಪ್ರಕ್ರಿಯೆ ಮತ್ತು ಅದರ ಫಲಿತಾಂಶವನ್ನು ಮ್ಯಾನಿಪ್ಯುಲೇಟ್ ಮಾಡುವ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ನಮಗೆ ಬಹು ಮಾನ್ಯವಾದ, ನಂಬಲರ್ಹವಾದ ಮೂಲಗಳಿಂದ ಮಾಹಿತಿ ದೊರೆತಿದೆ. ಮುಕ್ತ, ನ್ಯಾಯಯುತ ಹಾಗೂ ಪಾರದರ್ಶಕವಾದ ಚುನಾವಣೆಗಳನ್ನು ನಡೆಸುವುದರಲ್ಲಿ ಚುನಾವಣಾಧಿಕಾರಿಗಳ ಮತ್ತು ವೀಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ ಎನ್ನುವುದು ನಮಗೆ ತಿಳಿದಿದೆ. ಆಳುವ ಪಕ್ಷವು ತನ್ನ ಅಧಿಕಾರ ಮತ್ತು ಪ್ರಭಾವವನ್ನು ಬಳಸಿ, ಕೆಲವು ಮಂದಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಚುನಾವಣಾಧಿಕಾರಿಗಳು ಮತ್ತು ವೀಕ್ಷಕರು ಚುನಾವಣಾ ಅಪರಾಧಗಳನ್ನು ಎಸಗುವಂತೆ ಅವರ ಮೇಲೆ ಒತ್ತಡ ಹೇರಬಹುದೆಂಬ ಆತಂಕ ನಮ್ಮನ್ನು ಕಾಡುತ್ತಿದೆ ಎಂದು ಸಂಘಟನೆಗಳ ಮುಖಂಡರು ಕಳವಳ ವ್ಯಕ್ತಪಡಿಸಿದರು.

ಹಕ್ಕೊತ್ತಾಯಗಳು

  • ಪ್ರತಿಯೊಂದು ಮತದಾನ ಕೇಂದ್ರ (ಬೂತ್)ದಲ್ಲೂ ಚಲಾವಣೆಯಾದ ಮತಗಳ ದಾಖಲೆಯಾಗಿರುವ ಫಾರಂ 17ಸಿಯ ಒಂದು ಪ್ರತಿ ಪ್ರತಿಯೊಬ್ಬ ಅಭ್ಯರ್ಥಿಗೂ ದೊರೆಯುವಂತೆ ನೋಡಿಕೊಳ್ಳುವುದು. ಇದನ್ನು ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಯೂ ಮತದಾನ ಮುಗಿದ ತಕ್ಷಣವೇ ಮಾಡುವುದು ಕಡ್ಡಾಯವಾಗಿರುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ವಿವಿಧ ಕಾರಣಗಳಿಂದಾಗಿ ಇದು ನಡೆದಿರುವುದಿಲ್ಲ. ಮತಗಟ್ಟೆ ಅಧಿಕಾರಿಗಳು ಸದರಿ ಫಾರಂಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದರಿಂದ ಈ ನಿಬಂಧನೆಯು ಚುನಾವಣಾಧಿಕಾರಿಗಳಿಗೂ ಅನ್ವಯಿಸುತ್ತದೆ.
  • ಚಲಾವಣೆಯಾಗಿರುವ ಮತಗಳು ಮತ್ತು ಅದರ ಶೇಕಡಾವಾರು ಪ್ರಮಾಣವು ಫಾರಂ 17ರಲ್ಲಿನ      ಮಾಹಿತಿಯೊಂದಿಗೆ ತಾಳೆಯಾಗುವ ಫಾರಂ ಬಿ ಒದಗಿಸುವುದು.
  •  ಮತ ಎಣಿಕೆಯ ದಿನ ಎಣಿಕೆ ಶುರುವಾಗುವುದಕ್ಕಿಂತ ಮೊದಲು ಚುನಾವಣಾಧಿಕಾರಿಯ ಬಳಿಯಿರುವ ಮಾಹಿತಿಗೆ ಎಲ್ಲಾ ಫಾರಂಗಳೂ ತಾಳೆಯಾಗುವಂತೆ ನೋಡಿಕೊಳ್ಳುವುದು.
  • ಈ ವಿಎಂಗಳಲ್ಲಿ ಬೂತುವಾರು ಎಣಿಕೆ ಮಾಡಲಾಗಿರುವ ಸಂಖ್ಯೆಯು ಫಾರಂ 17ಸಿಯಲ್ಲಿ ದಾಖಲಾಗಿರುವ ವಾಸ್ತವಿಕ ಸಂಖ್ಯೆಗಳೊಂದಿಗೆ ತಾಳೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು.
  • ಕಟ್ಟುನಿಟ್ಟಾಗಿ ಭಾರತೀಯ ಚುನಾವಣಾ ಆಯೋಗದ ನಿರ್ದೇಶನಗಳಿಗೆ ಅನುಸಾರವಾಗಿ, ಈವಿಎಂ ಮತ ಎಣಿಕೆಗಿಂತ ಮೊದಲು ಅಂಚೆ ಮತಗಳನ್ನು ಅಭ್ಯರ್ಥಿಗಳ ಎದುರಿನಲ್ಲಿ ಎಣಿಕೆ ಮಾಡುವಂತೆ ನೋಡಿಕೊಳ್ಳುವುದು.
  • ಇಡೀ ಮತ ಎಣಿಕೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ವಿಡಿಯೋಗ್ರಾಫ್ ಮಾಡಿ ದಾಖಲೆ ಮಾಡಿಕೊಳ್ಳುವಂತೆ ನೋಡಿಕೊಳ್ಳುವುದು.
  • ಸ್ಟ್ರಾಂಗ್ ರೂಂಗಳನ್ನು ಗರಿಷ್ಠ ಮಟ್ಟದ ಬದ್ಧತೆಯೊಂದಿಗೆ ಕಾವಲು ಕಾಯುವುದು ಹಾಗೂ ಸುಪ್ರೀಂ ಕೋರ್ಟಿನ ಆದೇಶಗಳಿಗೆ ಅನುಗುಣವಾಗಿ ‘ಸಿಂಬಲ್ ಲೋಡಿಂಗ್ ಯೂನಿಟ್‌’ಗಳಿಗೆ ವಿಶೇಷ ರಕ್ಷಣೆಯನ್ನು ಒದಗಿಸುವುದನ್ನು ಖಚಿತಪಡಿಸಬೇಕು.
  • ಮತ ಎಣಿಕೆಯನ್ನು ಸಮರ್ಪಕವಾದ ಪರಿಶೀಲನೆ ಮತ್ತು ಮರು ಪರಿಶೀಲನೆಯಿಲ್ಲದೆ ಗಡಿಬಿಡಿ ಅಥವಾ ಗೊಂದಲದಲ್ಲಿ ಮಾಡದಂತೆ ನೋಡಿಕೊಳ್ಳುವುದು: ಯಾಕೆಂದರೆ ಪರಿಶೀಲನಾರ್ಹತೆಯೇ ‘ಪ್ರಜಾತಾಂತ್ರಿಕ ತತ್ವಗಳ ತಿರುಳಾಗಿದ್ದು, ಅದಿಲ್ಲದಿದ್ದರೆ ಚುನಾವಣೆಯಲ್ಲಿ ಸಾರ್ವಜನಿಕ ನಂಬಿಕೆ ಹೊರಟುಹೋಗುತ್ತದೆ.
  • ಈ ಮೊದಲಿನ ಹಂತಗಳಲ್ಲಿ ವ್ಯಾಪಕವಾಗಿ ವರದಿಯಾಗಿರುವ ರೀತಿಯಲ್ಲಿ, ಕೋಮುವಾದಿ ವಿಷ ಹರಡದಂತೆ, ಎಂಸಿಸಿ ನಿಬಂಧನೆಗಳ ಗಂಭೀರ ಉಲ್ಲಂಘನೆಯಾಗದಂತೆ. ಮತದಾರರನ್ನು ಬಲಾತ್ಕರಿಸದಂತೆ ಹಾಗೂ ಈವಿಎಂಗಳಲ್ಲಿ ದೋಷ ಉಂಟಾಗದಂತೆ, ಮೋಸ ನಡೆಯದಂತೆ ಕೂಡ ದಯವಿಟ್ಟು ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!