Friday, September 20, 2024

ಪ್ರಾಯೋಗಿಕ ಆವೃತ್ತಿ

ಭಾರತೀಯರಲ್ಲಿ ಐಕ್ಯತಾ ಭಾವನೆ ಮೂಡಿಸಲು ಭಾರತ್ ಜೋಡೋ ಯಾತ್ರೆ

ಇಂದು ದೇಶ ಕವಲು ದಾರಿಯಲ್ಲಿದೆ. ಬಿಜೆಪಿ ಪಕ್ಷ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿದ್ದು, ಇವರ ಹುನ್ನಾರವನ್ನು ಬಯಲು ಮಾಡಿ ದೇಶದ ಜನರಲ್ಲಿ ಐಕ್ಯತಾ ಭಾವನೆ ಮೂಡಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯದ ಬಂದಿಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.

ಇಂದು ದೇಶವನ್ನು ಜಾತಿ- ಧರ್ಮದ ಹೆಸರಿನಲ್ಲಿ ಒಡೆಯುವ ಹುನ್ನಾರ ನಡೆಯುತ್ತಿದೆ.ಧರ್ಮ- ಧರ್ಮಗಳ ನಡುವೆ ದ್ವೇಷದ ಕಿಚ್ಚು ಹಚ್ಚಲಾಗುತ್ತಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಪಕ್ಷದ ಹುನ್ನಾರವನ್ನು ಬಯಲು ಮಾಡಿ ದೇಶದಲ್ಲಿ ಐಕ್ಯತೆ ಮೂಡಿಸಲು ಹಾಗೂ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಸೆಪ್ಟೆಂಬರ್ 30ರಂದು ಭಾರತ್ ಜೋಡೋ ಯಾತ್ರೆಯು ಕರ್ನಾಟಕ ಪ್ರವೇಶಿಸಲಿದ್ದು, ಮಂಡ್ಯ ಜಿಲ್ಲೆಯಲ್ಲಿ ಅಕ್ಟೋಬರ್ 3 ರಿಂದ 8ರವರೆಗೆ ಪಾದಯಾತ್ರೆ ನಡೆಯಲಿದೆ.

ಅಕ್ಟೋಬರ್ 3 ರಂದು ಮಧ್ಯಾಹ್ನ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಆಗಮಿಸಲಿದ್ದು, 4 ಮತ್ತು 5ನೇ ತಾರೀಕು ಹಬ್ಬದ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಯುವುದಿಲ್ಲ. ಅ.6,7,8 ರಂದು ರಾಜ್ಯದಲ್ಲಿ ನಾಲ್ಕು ದಿನಗಳು ಪಾದಯಾತ್ರೆ ಸಂಚರಿಸಲಿದೆ ಎಂದರು.

ಅ.8 ರಂದು ಆದಿಚುಂಚನಗಿರಿ ಮಠಕ್ಕೆ ರಾಹುಲ್ ಗಾಂಧಿಯವರು ಭೇಟಿ ನೀಡಲಿದ್ದಾರೆ. ನಂತರ ಅಲ್ಲಿಂದ ಪಾದಯಾತ್ರೆ ತುಮಕೂರು ಗಡಿ ಪ್ರವೇಶಿಸಲಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಸುಮಾರು 45 ಕಿ.ಮೀ ಪಾದಯಾತ್ರೆ ನಡೆಯಲಿದ್ದು, ಈ ಪಾದಯಾತ್ರೆ ಯಶಸ್ವಿಗೊಳಿಸಲು ಪ್ರತಿ ವಿಧಾನಸಭಾ ಕ್ಷೇತ್ರದಿಂದ 5,000 ಕ್ಕೂ ಹೆಚ್ಚು ಮಂದಿ ಆಗಮಿಸಲಿದ್ದಾರೆ. ಮೇಕೆದಾಟು ಪಾದಯಾತ್ರೆ ಯಶಸ್ವಿಯಾದಂತೆ ಭಾರತ ಜೋಡೋ ಪಾದಯಾತ್ರೆಯೂ ಕೂಡ ಯಶಸ್ವಿಯಾಗಲಿದೆ. ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಕೈಜೋಡಿಸಬೇಕೆಂದು ಕೋರಿದರು.

ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಮಾತನಾಡಿ, ಪ್ರತಿ ಕ್ಷೇತ್ರದಿಂದಲೂ ಐದು ಸಾವಿರ ಕಾರ್ಯಕರ್ತರನ್ನು ಈ ಪಾದಯಾತ್ರೆಗೆ ಕರೆ ತರಬೇಕು. ಇದರಿಂದ ಪಕ್ಷ ಬಲವರ್ಧನೆ ಆಗಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಮಾತನಾಡಿ, 2023 ವಿಧಾನಸಭಾ ಚುನಾವಣೆಗೆ ಪಕ್ಷ ಬಲಗೊಳಿಸಲು ಹಾಗೂ ದೇಶದಲ್ಲಿ ನಡೆಯುತ್ತಿರುವ ಕೋಮುವಾದಿ ರಾಜಕೀಯವನ್ನು ಕೊನೆಗಾಣಿಸಲು ಈ ಯಾತ್ರೆ ಯಶಸ್ವಿಗೊಳಿಸಬೇಕಿದೆ ಎಂದರು.

ಮಾಜಿ ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ, ಎಂ.ಎಸ್. ಆತ್ಮಾನಂದ,ಮಾಜಿ ಶಾಸಕ ಬಿ. ಪ್ರಕಾಶ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ಗಣಿಗ ರವಿಕುಮಾರ್, ವಿಜಯ್ ರಾಮೇಗೌಡ, ಡಾ.ಕೃಷ್ಣ,ಎಂ.ಎಸ್.ಚಿದಂಬರ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!