Saturday, October 19, 2024

ಪ್ರಾಯೋಗಿಕ ಆವೃತ್ತಿ

ಗಾಂಧಿ ಎಂಬ ವಿಚಿತ್ರ ಫಕೀರ

ಮಾಚಯ್ಯ ಎಂ ಹಿಪ್ಪರಗಿ

ನಡುಗುತ್ತಲೇ ಇತ್ತು!
ಸೂರ್ಯ ಮುಳುಗದ
ಸಾಮ್ರಾಜ್ಯವದು
ಕ್ಷಣಕ್ಷಣಕ್ಕೂ
ನಡುಗುತ್ತಲೇ ಇತ್ತು,
ಎದುರಿಗೆ ನಿಂತ
ಅರೆಬೆತ್ತಲೆಯ
ಒಬ್ಬ ಸೀದಾಸಾದಾ
ಫಕೀರನನ್ನು ಕಂಡು…

ಎಂಥಾ ವಿಚಿತ್ರ ಮನುಷ್ಯ
ಆ ಫಕೀರ…

ಕೈಯಲೊಂದು ಕೋಲು
ಸೊಂಟದಲಿ ಗಡಿಯಾರ
ಮೂಗಿನ ತುದಿಯ ಕನ್ನಡಕ
ಯುದ್ಧಕೆ ಹೊರಟವನ
ಹತಾರಗಳು ಇವಿಷ್ಟೆ;
ಮುಖದ ಮೇಲಿನ
ಮಗುವಿನಂಥಾ ನಗುವನೂ ಸೇರಿ…

ಉರಿವ ಬೆಂಕಿಯ ನಡುವೆ
ಹರಿವ ನೀರಂತೆ ಸರಿದ,
ಸುಡುವ ಬಿಸಿಲಿಗು ಕೂಡಾ
ತಂಗಾಳಿಯ ನಂಟು ಬೆಸೆದ,
ಒಣಗಿದ ಹುಲ್ಲುಕಡ್ಡಿಗೂ
ಚಳವಳಿಯ ಚಡಪಡಿಕೆ ತುಂಬಿದ,
ಜೋಮು ಹಿಡಿದ ನೆಲಕೆ
ಚಲನೆಯ ಕಿಚ್ಚು ಹಬ್ಬಿಸಿದ
ಹರಿದು ಹಂಚಿದ್ದ
ಅಂಗಿಯನು
ಒಂದೇ ಸಮನೆ
ಹೊಲೆಯುತ್ತಾ ಬಂದ
ಸುಮ್ಮನಿರಬಹುದಿದ್ದ ಆ ಫಕೀರ
ಸುಮ್ಮನಿರಲಾರೆನೆಂದ….

ಎಂಥಾ ವಿಚಿತ್ರ ಮನುಷ್ಯ
ಆ ಫಕೀರ…

ಸತ್ಯವೆಂದ, ಅಹಿಂಸೆಯೆಂದ
ಅಂದದ್ದನ್ನೆಲ್ಲ ಬದುಕಿ ಬಂದ;
ಕೇರಿ-ಊರುಗಳ
ಗಡಿಯು ಬೇಡವೆಂದ
ಮುಟ್ಟಿ ಮನುಷ್ಯರಾಗುವ
ಬೆಸುಗೆಯೊಂದೇ ಶಾಶ್ವತವೆಂದ;
ಪ್ರೀತಿಸಿ… ಪ್ರೀತಿಸಿ.. ಎಂದ
ತನ್ನ ದ್ವೇಷಿಸುವವರ
ದಿಬ್ಬಣದ ನಡುವೆ
ನಗುನಗುತ್ತ ನಿಂದ…

ಎಂಥಾ ವಿಚಿತ್ರ ಮನುಷ್ಯ
ಈ ಫಕೀರ..

ಸುಡಲುಬಹುದಿದ್ದ
ಜ್ವಾಲೆಯನು
ಸಾವಿರ ಗುಡಿಸಲುಗಳ ಮುಂದೆ
ಹಣತೆಯಾಗಿ ತಂದ;
ಮೂಲೆಯ ಪೊರಕೆಯನು
ಶ್ರಮದಾನವೆಂದ;
ಬೀದಿಯ ಗುಡಿಸುತ್ತಲೇ
ಭಾವಗಳ ತೊಳೆದ…
ಸಾವಬಹುದು ನಾನು
ಸೋಲಲಾರೆನೆಂದ;
ಬದುಕಿ ಸಾಧಿಸಿದ್ದು
ಸಾಕೆನಿಸಿದಾಗ
ಸಾವಿಗೂ ಆಮಂತ್ರಣ
ಕೊಟ್ಟು ಕರೆದ;
ಬದುಕಿ ಪಾಠವಾದ,
ಸತ್ತು ಶಾಶ್ವತವಾದ..

ಎಂಥಾ ವಿಚಿತ್ರ ಮನುಷ್ಯ
ಈ ಫಕೀರ..
ಕೊಂದವರ ಕೈಯಲ್ಲೂ
ಹೂವು ಹಾಕಿಸಿಕೊಳ್ಳುವ ಧೀರ!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!