Tuesday, September 17, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ: ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ

ಮಂಡ್ಯತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಬುಧವಾರ ದಿಢೀರ್ ಭೇಟಿ ನೀಡಿ, ಭೂ ಹಿಡುವಳಿ ಹೊಂದಿರುವ ಖಾತೆದಾರರ ರೈತರ ಪಹಣಿಗಳಿಗೆ (ಆರ್.ಟಿ.ಸಿ) ಆಧಾರ್ ಕಾರ್ಡ್ ಲಿಂಕ್ ಮಾಡುವ ಆಧಾರ್ ಸೀಡಿಂಗ್ ಯೋಜನೆಯ ಪ್ರಗತಿಯನ್ನು ಚುರುಕುಗೊಳಿಸಲು ಸೂಚಿಸಿದರು.

ಮಂಡ್ಯ ಜಿಲ್ಲೆಯಲ್ಲಿ 21 ಲಕ್ಷ ಖಾತೆದಾರ ರೈತರಿದ್ದು, ಈ ಪೈಕಿ 1.10 ಮಂದಿಯ ಆಧಾರ್ ಸೀಡಿಂಗ್ ಮುಕ್ತಾಯವಾಗಿದ್ದು, ಉಳಿದ ರೈತರ ಆಧಾರ್ ಕಾರ್ಡ್ ಲಿಂಕ್ ಯೋಜನೆ ಪೂರ್ಣಗೊಳಿಸಲು ತಾಕೀತು ಮಾಡಿದರು.

ಕಛೇರಿಯಲ್ಲಿ ಹಾಜರಿದ್ದ ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಜಿಲ್ಲಾಧಿಕಾರಿಗಳು, ಸೂಕ್ತ ಪರಿಹಾರ ಕಲ್ಪಿಸುವಂತೆ ತಹಶೀಲ್ದಾರ್ ಗೆ ಸೂಚಿಸಿದರು. ಕೆರಗೋಡು ಗ್ರಾಮದ ಮಹಿಳೆ ಸುಧಾ ಎಂಬುವವರು ರಸ್ತೆ ಒತ್ತುವರಿ ತೆರವು ಮಾಡಿಸುವಂತೆ ಹಾಗೂ ಮಳೆಯಿಂದ ಹಾನಿಗೊಳಗಾಗಿರುವ ಮನೆ ನಿರ್ಮಾಣಕ್ಕೆ ನೆರವಾಗುವಂತೆ ಮನವಿ ಮಾಡಿದರು.

ಈ ಸಂಬಂಧ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಲು ತಹಶೀಲ್ದಾರ್ ಗೆ ಸೂಚಿಸಿದರು. ಸಾರ್ವಜನಿಕರ ಪಡಿತರ ಚೀಟಿ ಸಮಸ್ಯೆ, ಆರ್.ಟಿ.ಸಿ ತಿದ್ದುಪಡಿ ಹಾಗೂ ಕಂದಾಯ ಇಲಾಖೆಯ ಸಮಸ್ಯೆಗಳ ನಿವಾರಣೆ ಮನವಿ ಮಾಡಿದ, ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಆದೇಶದಂತೆ ಖಾತೆದಾರ ರೈತರ ಆಧಾರ್ ಸೀಡಿಂಗ್ ಯೋಜನೆಯಡಿ ಜಿಲ್ಲೆಯ 21 ಲಕ್ಷ ಖಾತೆದಾರ ರೈತರ ಪೈಕಿ ಈಗಾಗಲೇ 1.10 ಲಕ್ಷ ರೈತರ ಆಧಾರ್ ಲಿಂಕ್ ಮುಗಿಸಲಾಗಿದ್ದು ಜೂನ್ ಅಂತ್ಯದೊಳಗೆ ಆಧಾರ್ ಸೀಡಿಂಗ್ ಯೋಜನೆ ಪೂರ್ಣಗೊಳಿಸಲಾಗುವುದೆಂದರು.

ಕಂದಾಯ ಗ್ರಾಮಗಳಲ್ಲಿ ಸುಮಾರು 4 ಸಾವಿರ ಮಂದಿಗೆ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಲಾಗುತ್ತಿದೆ. ಮಂಡ್ಯ ತಾಲ್ಲೂಕು ಆಡಳಿತದಿಂದ 419 ಮಂದಿಗೆ ಹಕ್ಕುಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.

ಮೊಕದ್ದಮೆ ಇತ್ಯರ್ಥ

ಮಂಡ್ಯ ಜಿಲ್ಲಾಡಳಿತ ಆದ್ಯತೆಯಾಗಿ ಕೈಗೆತ್ತಿಕೊಂಡಿರುವ ಕಂದಾಯ ಮೊಕದ್ದಮೆಗಳ ವಿಲೇವಾರಿ ತೀವ್ರ ಪ್ರಗತಿಯಲ್ಲಿದ್ದು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸುಮಾರು 11 ಸಾವಿರ ಮೊಕದ್ದಮೆಗಳ ಪೈಕಿ 9,500 ಮೊಕದ್ದಮೆಗಳ ವಿಲೇವಾರಿ ಮಾಡಲಾಗಿದೆ ವಿವರಿಸಿದರು.

ಪೌತಿ ಖಾತೆ ವಿಲೇವಾರಿ

ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಪೌತಿ ಖಾತೆಗಳ ಪೈಕಿ 18 ಸಾವಿರ ಪೌತಿ ಖಾತೆಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಸರ್ಕಾರಿ ಇಲಾಖೆ ಸಿಬ್ಬಂದಿಗಳು ನಿಗಧಿತ ಸಮಯದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮುಗಿಸುವಂತೆ ತಾಕೀತು ಮಾಡಿದರು.

ಟಾಸ್ಕ್ ಪೋರ್ಸ್ ರಚನೆ

ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ರಸ್ತೆ ಬದಿ ಮರಗಳನ್ನು ತೆರವುಗೊಳಿಸಲು ಹಾಗೂ ಮಳೆ ಮತ್ತು ಬಿರುಗಾಳಿಗೆ ಉರುಳಿ ಬಿದ್ದ ಮರಗಳನ್ನು ಕೂಡಲೇ ತೆರವು ಮಾಡಲು ಪ್ರತಿ ತಾಲ್ಲೂಕು ಮಟ್ಟದಲ್ಲಿ ಕಂದಾಯ, ಅರಣ್ಯ, ವಿದ್ಯುತ್, ಅಗ್ನಿಶಾಮಕ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗುವುದೆಂದು ವಿವರಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಎಡಿಎಲ್’ಆರ್ ಮಮತಾ, ಭೂಮಿ ಶಾಖೆ ಸಲಹೆಗಾರ ಲೋಹಿತ್, ಗ್ರಾಮ ಲೆಕ್ಕಾಧಿಕಾರಿ ತೇಜಸ್ ಗೌಡ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!