Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿ.ಎಲ್.ಸಂತೋಷ್ ನೇತೃತ್ವದ ಸಭೆಗೆ ಪ್ರಮುಖ ಬಿಜೆಪಿ ನಾಯಕರ ಗೈರು !

ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ಗುರುವಾರ ಲೋಕಸಭಾ ಕ್ಷೇತ್ರಗಳ ‘ಮತದಾರರ ಚೇತನ ಮಹಾಭಿಯಾನ’ವನ್ನು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಸಿದ್ದು, ಪ್ರಮುಖ ನಾಯಕರೇ ಗೈರಾಗಿದ್ದಾರೆ.

ಮತದಾರರ ಚೇತನ ಮಹಾಭಿಯಾನದ ಭಾಗವಾಗಿ ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳ ಸಭೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ನಡೆಯಿತು.

ಈ ಸಭೆಗೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ವಿ ಸೋಮಣ್ಣ ಹಾಗೂ ಎಂ ಪಿ ರೇಣುಕಾಚಾರ್ಯ ಅವರೆಲ್ಲ ಗೈರಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಆಪರೇಷನ್ ಹಸ್ತ ವದಂತಿ

ಬಿಜೆಪಿ ಶಾಸಕರಾದ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ಎಂ ಪಿ ರೇಣುಕಾಚಾರ್ಯ ಅವರು ಆಪರೇಷನ್ ಹಸ್ತದಲ್ಲಿ ಸಿಲುಕಿದ್ದಾರೆ ಎಂಬ ವದಂತಿ ಮಾತುಗಳಿಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ನಾಯಕರೆಲ್ಲ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ. ಮುಂದುವರಿದು, ಸೋಮಶೇಖರ್ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸದ್ಯ ಇವರೆಲ್ಲ ಬಿ ಎಲ್ ಸಂತೋಷ್ ನೇತೃತ್ವದ ಸಭೆಗೆ ಗೈರಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ರೇಣುಕಾಚಾರ್ಯ ಹೇಳಿದ್ದೇನು ? 

ಸಭೆಗೆ ಗೈರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ, “ನನಗೆ ನೋಟಿಸ್ ಕೊಟ್ಟಿದ್ದಾರೆ. ಆ ನೋಟಿಸ್ ವಾಪಸ್ಸು ಪಡೆಯಬೇಕು. ಅದಕ್ಕೇ ಸಭೆಗೆ ಹಾಜರಾಗುತ್ತಿಲ್ಲ” ಎಂದಿದ್ದಾರೆ.

“ನಾನು ಏನು ಹೇಳಬೇಕೊ ಅದನ್ನು ಈಗಾಗಲೇ ಹೇಳಿದ್ದೇನೆ. ಇದರಿಂದ ನನಗೆ ವೈಯಕ್ತಿಕವಾಗಿ ಯಾವುದೇ ಲಾಭ ಇಲ್ಲ. ಸಾಮಾನ್ಯ ಕಾರ್ಯಕರ್ತರ ಅಪೇಕ್ಷೆಯಂತೆ ಇರುವುದನ್ನು ನೇರವಾಗಿ ಹೇಳಿದ್ದೇನೆ. ಯಡಿಯೂರಪ್ಪ ಅವರಂತ ನಾಯಕರನ್ನು ಕಡೆಗಣಿಸಿರುವುದು ಬಿಜೆಪಿಗೆ ಶಾಪವಾಗಿದೆ” ಎಂದು ಹೇಳಿದ್ದಾರೆ.

“ಬಿಜೆಪಿಯಲ್ಲಿ ವರ್ಚಸ್ಸು ಇರುವವರನ್ನು ಬೆಳೆಯಲು ಬಿಡುತ್ತಿಲ್ಲ. ವಿಜಯೇಂದ್ರ ಅಂತವರನ್ನ ಮೂಲೆಗುಂಪು ಮಾಡಿದ್ದಾರೆ. ನಾನು ನೇರವಾಗಿ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ದ ಮಾತಾಡಿಲ್ಲ. ನಾನು ಮಾತಾಡಿರುವುದು ಕೆಲ ವ್ಯಕ್ತಿಗಳ ದೌರ್ಬಲ್ಯವನ್ನು. ಅದನ್ನ‌ ನೇರವಾಗಿಯೇ ಖಂಡಿಸಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!