ಗುತ್ತಿಗೆದಾರನಿಂದ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ(ACB)ಕ್ಕೆ ಸಹಾಯಕ ಇಂಜಿನಿಯರ್ ಹಾಗೂ ಆತನ ಕಾರು ಚಾಲಕ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಮದ್ದೂರು ಪಟ್ಟಣದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಇಂದು ನಡೆದಿದೆ.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಮಹಾಲಿಂಗಯ್ಯ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ. ತಾಲೂಕಿನ ಈರೇಗೌಡನದೊಡ್ಡಿಯ ಗುತ್ತಿಗೆದಾರರೊಬ್ಬರು 5 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಮುಗಿಸಿ ಬಿಲ್ ಪಾವತಿಸುವಂತೆ ಮೇಲಾಧಿಕಾರಿಗೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ.
ಆದರೆ ಸಹಾಯಕ ಇಂಜಿನಿಯರ್ ಮಹಾಲಿಂಗಯ್ಯ ಕಚೇರಿ ಕೆಲಸಕ್ಕೆ 35 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ. ಇದರ ಬಗ್ಗೆ ಗುತ್ತಿಗೆದಾರ ಮೊದಲೇ ಎಸಿಬಿಗೆ ದೂರು ನೀಡಿದ್ದರು.
ಅದರಂತೆ ಇಂದು ತಮ್ಮ ಕಚೇರಿಯಲ್ಲಿಯೇ ಸಹಾಯಕ ಇಂಜಿನಿಯರ್ ಮಹಾಲಿಂಗಯ್ಯಗೆ ೩೫ ಸಾವಿರ ರೂ.ಲಂಚ ನೀಡಿದ್ದಾರೆ. ಅದನ್ನು ತನ್ನ ಕಾರು ಚಾಲಕ ನವೀನ್ ಬಳಿ ನೀಡಿದ್ದಾರೆ.
ಇದನ್ನೆಲ್ಲ ಮುಂಚಿತವಾಗಿಯೇ ಪ್ಲಾನ್ ಮಾಡಿದ್ದ ಎಸಿಬಿ ಎಸ್ಪಿ ಸಜಿತ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಲಂಚದ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ
ನಡೆಸುತ್ತಿದ್ದಾರೆ.
ಮಂಡ್ಯದ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.