ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು ನೀಡಿರುವ ವರದಿಯ ಶಿಫಾರಸ್ಸನ್ನು ಕೂಡಲೇ ಅನುಷ್ಟಾನಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸ್ವಾಭಿಮಾನಿ ಎಸ್ಸಿ,ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅಡ್ಡಿಪಡಿದರಾದರೂ ಬ್ಯಾರಿಕೇಡ್ ಬೇಧಿಸಿ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಮುಖಂಡ ವೆಂಕಟಗಿರಿಯಯ್ಯ ಮಾತನಾಡಿ,ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು ನೀಡಿರುವ ವರದಿಯಂತೆ, ಪರಿಶಿಷ್ಠ ಜಾತಿಗಳಿಗೆ ಶೇ.15 ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಠ ಪಂಗಡ(ಎಸ್‌ಟಿ)ಗಳಿಗೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಗಳು ಅಹೋರಾತ್ರಿ ಅನಿರ್ಧಿಷ್ಠ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಧರಣಿ ನಿರತ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಗಳನ್ನು ಭೇಟಿಮಾಡಿ, ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವಾರು ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
ರಾಜ್ಯದಲ್ಲಿ 11ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಸ್ಮಶಾನ ಭೂಮಿ ಇರುವುದಿಲ್ಲ.ಹೊಸ ಶಿಕ್ಷಣ ನೀತಿಯಲ್ಲಿ ಉನ್ನತ ವ್ಯಾಸಂಗಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿಂದುಳಿದ ವರ್ಗಗಳಿಗೆ ಅವಕಾಶವನ್ನು ತಪ್ಪಿಸಲಾಗಿದೆ.
ಇದನ್ನು ಕೂಡಲೇ ಸರಿಪಡಿಸಿ ಮೊದಲಿನಂತೆ ಶಿಕ್ಷಣದಲ್ಲಿ ಮೀಸಲಾತಿಯನ್ನು ಮುಂದುವರೆಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆ 1989ರ ಅನ್ವಯ ಈ ಜಾತಿ, ಪಂಗಡಗಳಿಗೆ ಭದ್ರತೆ ಒದಗಿಸಬೇಕು ಮತ್ತು ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಬೇಕು ಎಂದರು.
ಮಂಡ್ಯ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಚಂದ್ರ ನಾಯಕ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗ ಮೋಹನ್ ದಾಸ್‌ರವರ ವರದಿ ಸಲ್ಲಿಸಿ ಇಂದಿಗೆ ಎರಡು ವರ್ಷಗಳು ಕಳೆದಿವೆ. ಆದರೂ ಸಹ ಸರ್ಕಾರ ಯಾವುದೇ ಮೀಸಲಾತಿ ಹೆಚ್ಚಳದ ಕ್ರಮ ಕೈಗೊಂಡಿಲ್ಲ ಆದ್ದರಿಂದ ಹೋರಾಟ ಅನಿವಾರ್ಯ ಎಂದರು.
ಪ್ರತಿಭಟನೆಯಲ್ಲಿ ರಮಾನಂದ, ಎಸ್. ಶಿವಶಂಕರ್, ತಿರುಮಲಪುರ ಕೆ.ಗೋಪಾಲ್, ಎಸ್.ಸಿ/ಎಸ್.ಟಿ ಒಕ್ಕೂಟಗಳ ಸಂಘಟನೆಯ ಆನಂದ್, ಉಮ್ಮಡಹಳ್ಳಿ ಉಮೇಶ್, ವಾಲ್ಮೀಕಿ ಜನಾಂಗದ ಮುಖಂಡರಾದ ಅರಕೇಶ್, ಪುಟ್ಟಸ್ವಾಮಿ ನಾಯಕ್, ಕೆ.ಪ್ರಮೀಳ, ತಮ್ಮಣ್ಣ, ಕೃಷ್ಣ, ಮಮತಾ, ನರಸನಾಯಕ ಸೇರಿದಂತೆ ಹಲವರಿದ್ದರು.