ಮಂಡ್ಯ ತಾಲೂಕಿನ ಕೊತ್ತತ್ತಿ ಒಂದನೇ ಹಾಗೂ ಎರಡನೇ ವೃತ್ತದ ವ್ಯಾಪ್ತಿಯಲ್ಲಿ ಸುಮಾರು 12,000 ಪೌತಿಖಾತೆ ಗಳು ಬಾಕಿ ಇವೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಮಂಡ್ಯ ತಾಲೂಕಿನ ಹಳುವಾಡಿ ಶ್ರೀನಿವಾಸ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ತಗ್ಗಹಳ್ಳಿ ಹಾಗೂ ಹಳುವಾಡಿ ಗ್ರಾಮ ಪಂಚಾಯಿತಿ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌತಿ ಖಾತೆ ಆಂದೋಲನ ಪೂರ್ಣ ಪ್ರಮಾಣದಲ್ಲಿ ಆಗಬೇಕು. ತಮ್ಮ ದಾಖಲಾತಿಗಳನ್ನು ಸಲ್ಲಿಸಿ, ಸಮಸ್ಯೆಗಳನ್ನು ಸರಿಪಡಿಸಿಕೊಂಡು ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕು ಎಂದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇಲಾಖೆವಾರು ತಮ್ಮ ಅಹವಾಲುಗಳನ್ನು ಸ್ವೀಕರಿಸಿ ಸಾರ್ವಜನಿಕರ ಹಾಗೂ ರೈತರ ಕುಂದು ಕೊರತೆಗಳನ್ನು ಪರಿಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಎಂದು ತಿಳಿಸಿದರು.

ಸರ್ಕಾರ ನೂತನವಾಗಿ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆವಿನ್ಯೂ ಸೈಟ್ ಗಳ ಮಾಲೀಕರಿಗೆ 11ಬಿ ಅನ್ವಯ ಬಿ ಖಾತಾ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಕಮಿಟಿ ರಚನೆ ಮಾಡಿ ಇನ್ನು 15 ದಿನದಲ್ಲಿ ನೂತನ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಆದೇಶ ಮಾಡಿದೆ ಎಂದು ಹೇಳಿದರು.
ಗ್ರಾಮಠಾಣ ವ್ಯಾಪ್ತಿಯಲ್ಲಿ ಮನೆ ಕಟ್ಟಬೇಕಾದರೆ 30 ಅಡಿ ರಸ್ತೆಗೆ ಜಾಗ ಬಿಟ್ಟು ಮನೆಯಲ್ಲಿ ನಿರ್ಮಾಣ ಮಾಡಬೇಕು.ಈ ಈ ರೀತಿಯಾಗಿ ಎಲ್ಲವನ್ನು ಕಾನೂನು ವ್ಯಾಪ್ತಿಗೆ ತಂದು ಹೊಸ ಯೋಜನೆ ಜಾರಿಗೆ ತರುತ್ತಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ ಅಕ್ಕ ಪಕ್ಕದವರು ಹಾಗೂ ಅಣ್ಣತಮ್ಮಂದಿರು ಒತ್ತುವರಿ ಮಾಡಿಕೊಂಡಿರುವ ಜಮೀನು ಗಳನ್ನು ಕಾನೂನು ರೀತಿ ತೆರವುಗೊಳಿಸಬೇಕಾದರೆ ಪೊಲೀಸ್ ರಕ್ಷಣೆ ತೆಗೆದುಕೊಂಡು ಬಿಡಿಸಿ ಕೊಡುತ್ತೇವೆ, ಗ್ರಾಮ ಪಂಚಾಯಿತಿಯ ಗ್ರಾಮಠಾಣ ಒಳಗಡೆ ಬರುವ ಆಸ್ತಿಗಳಿಗೆ ಶೇ.100ರಷ್ಟು ಇ -ಸ್ವತ್ತು ಕೊಡಲಾಗುವುದು ಎಂದರು.
ತಾಲೂಕು ಪಂಚಾಯಿತಿ ಇಒ ಲೋಕೇಶ್ ಮೂರ್ತಿ ಮಾತನಾಡಿ ಸರ್ವೆ ನಂಬರ್ ಗಳಲ್ಲಿ ಮನೆ ಕಟ್ಟಿಕೊಂಡಿದ್ದರೆ ಪಂಚಾಯಿತಿ ಖಾತೆಯನ್ನು ಕ್ರಮಬದ್ಧವಾಗಿ ಅಲಿ ಲೇಶನ್ ಮಾಡಿಸಿಕೊಂಡು ಗ್ರಾಮ ಪಂಚಾಯಿತಿ ಖಾತೆಯನ್ನು ಮಾಡಿಸಿಕೊಂಡರೆ ನಿಮಗೆ ದಾಖಲೆಯಾಗಿ ಅವು ಉಳಿಯುತ್ತವೆ. ಹಳ್ಳಿಗಳಲ್ಲಿ ರಸ್ತೆ ಸಮಸ್ಯೆಗಳು ಬರುತ್ತಿರುತ್ತವೆ ಅವುಗಳನ್ನು ನೀವೇ ಸ್ಪಂದಿಸಿ ಸರಿಪಡಿಸಿಕೊಂಡರೆ ಸೂಕ್ತ ಎಂದರು.
ಹಳ್ಳಿಗಳಲ್ಲಿ ಮನೆ ನಿರ್ಮಾಣ ಮಾಡುವವರು 25 ರಿಂದ 30 ಅಡಿ ರಸ್ತೆಗೆ ಜಾಗ ಬಿಟ್ಟುಕೊಂಡು ಮನೆ ನಿರ್ಮಾಣ ಮಾಡಿದರೆ ಅನುಕೂಲ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿ ಕಾರಿ ಶಿವಮೂರ್ತಿ, ಎಡಿಎಲ್ಆರ್ ಮಮತಾ, ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ , ಹಳುವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಆರ್. ಕೃಷ್ಣ, ಉಪ ತಹಸಿಲ್ದಾರ್ ಡಿ. ತಮ್ಮಣ್ಣ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ತಗ್ಗಹಳ್ಳಿ ಕೃಷ್ಣ, ಕೆ.ಎಚ್. ನಾಗರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು




