Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕುವೆಂಪು ಅವರಿಗೆ ಭಾರತ ರತ್ನ ನೀಡಲು ಶಿಫಾರಸು: ಸಚಿವ ಸಂಪುಟಕ್ಕೆ ದಿನೇಶ ಗೂಳಿಗೌಡ ಅಭಿನಂದನೆ

ರಾಷ್ಟ್ರಕವಿ ಕುವೆಂಪು ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿರುವುದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಶಾಸಕ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ ಗೂಳಿಗೌಡ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಖ್ಯಾತ ನಟ ವಿಷ್ಣುವರ್ಧನ್ ಹಾಗೂ ದಕ್ಷಿಣ ಭಾರತದ ಹೆಸರಾಂತ ಚಿತ್ರ ನಟಿ ಬಿ.ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು ಅಭಿಮಾನದ ಸಂಗತಿಯಾಗಿದೆ ಎಂದಿದ್ದಾರೆ.

ಕುವೆಂಪು ಅವರಿಗೆ ಭಾರತ ರತ್ನ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದ ಕುವೆಂಪು ಎಂಬ ಕಾವ್ಯನಾಮದ ಮೂಲಕ ಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪ, ಪುಟ್ಟಪ್ಪ ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ.
ಅವರ ರಾಮಾಯಣ ದರ್ಶನಂನಂಥ ಮಹಾ ಗ್ರಂಥಗಳು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ವಿಶ್ವ ವ್ಯಾಪಿ. ವಿಶ್ವ ಮಾನವ ತತ್ವವನ್ನು ಸಾರಿದ ರಾಷ್ಟ್ರಕವಿ ಅವರು. ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು. ಅವರಿಗೆ ಮರಣಾನಂತರದ ಭಾರತ ರತ್ನ ನೀಡಿದಲ್ಲಿ ಕನ್ನಡಕ್ಕೆ ಹಿರಿಮೆ, ದೊಡ್ಡ ಗೌರವ ದೊರೆಯಲಿದೆ ಎಂದಿದ್ದಾರೆ.

ಕರ್ನಾಟಕ ರತ್ನ

ಡಾ. ವಿಷ್ಣುವರ್ಧನ್, ಅವರು ಅಭಿಮಾನಿಗಳಿಂದ ಪ್ರೀತಿಯಿಂದ ‘ಸಾಹಸಸಿಂಹ’ ಮತ್ತು ‘ಅಭಿನಯ ಭಾರ್ಗವ’ ಎಂದು ಕರೆಯಲ್ಪಟ್ಟಿದ್ದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ತಮ್ಮ ವಿಶಿಷ್ಟ ನಟನೆ, ಧ್ವನಿ ಮತ್ತು ಸಂಭಾಷಣೆಗಳಿಂದ ಜನಮನ ಗೆದ್ದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ ಅವರಿಗೆ ಕರ್ನಾಟಕ ರತ್ನ ನೀಡುವುದು ಕರ್ನಾಟಕ ಸರ್ಕಾರದ ಸೂಕ್ತ ನಿರ್ಧಾರವಾಗಿದೆ.

ಬಿ. ಸರೋಜಾ ದೇವಿ ಅವರು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿರುವ ಭಾರತದ ಪ್ರಸಿದ್ಧ ನಟಿ. ಅವರನ್ನು ‘ಅಭಿನಯ ಸರಸ್ವತಿ’ ಮತ್ತು ‘ಕನ್ನಡದ ನಟಿಮಣಿ’ ಎಂದು ಕರೆಯಲಾಗುತ್ತದೆ. 1955ರಲ್ಲಿ ಕನ್ನಡದ ಮಹಾಕವಿ ಚಿತ್ರದ ಮೂಲಕ ತಮ್ಮ ನಟನೆಯ ವೃತ್ತಿಜೀವನ ಪ್ರಾರಂಭಿಸಿದರು. ಇವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1992ರಲ್ಲಿ ಭಾರತ ಸರ್ಕಾರವು ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ ಎಂದು ದಿನೇಶ ಗೂಳಿಗೌಡ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ