Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾಧಿಸುವ ಹಂಬಲ ಹೊಂದಿದ್ದರೆ ಸಾಧನೆ ಸಾಧ್ಯ: ಶಾಂತಾ ಹುಲ್ಮನಿ

ಮಹಾಕವಿ ಕುವೆಂಪು ಅವರು ನುಡಿದಂತೆ ಯಾರು ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಛಲಗಾರಿಕೆಯಿಂದ ಸಾಧಿಸುವ ಹಂಬಲ ಹೊಂದಿದ್ದರೆ ಸಾಧನೆ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾ ಎಲ್.ಹುಲ್ಮನಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಸಂಸತ್ ಸದಸ್ಯೆ ಸುಮಲತಾ ಅಂಬರೀಷ್ ಅವರ 59ನೇ ವರ್ಷದ ಜನ್ಮದಿನದ ಅಂಗವಾಗಿ ಮಂಡ್ಯ ಜಿಲ್ಲಾ ಸ್ವಾಭಿಮಾನಿ ಪಡೆ ಹಾಗೂ ಸುಮಲತಾ ಅಂಬರೀಷ್ ಅವರ ಅಭಿಮಾನಿ ಬಳಗ ಆಯೋಜಿಸಿದ್ದ ಜಿಲ್ಲಾ ಮಹಿಳಾ ಸಾಧಕಿಯರಿಗೆ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ಸಾಧನೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದ್ದು, ಸಾಧಿಸುವ ಹಾದಿ ಸದಾ ತೆರೆದಿರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳಾ ಸಾಧಕಿಯರನ್ನು ಅಭಿನಂದಿಸುತ್ತಿರುವ ಕಾರ್ಯ ಶ್ಲಾಘನೀಯ. ಸಾಧನೆಗೆ ಹೆಣ್ಣು-ಗಂಡು ಎಂಬ ಭೇದವಿಲ್ಲ. ಸಾಧನೆಯ ಹಾದಿ ನಿರಂತರವಾಗಿ ಸಾಗುವ ಪ್ರಕ್ರಿಯೆಯಾಗಿದೆ. ಕುಟುಂಬವನ್ನು ನಿಭಾಯಿಸುವ ನಮ್ಮೆಲ್ಲರ ತಾಯಿಯೂ ಸಾಧಕಿ ಎಂದು ಗುಣಗಾನ ಮಾಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಗೌರವವನ್ನು ಹೆಚ್ಚಿಸುವ ಕಾರ್ಯದಲ್ಲಿ ನಿರತರಾಗಿರುವ ಸಂಸದೆ ಸುಮಲತಾ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಅರ್ಥಪೂರ್ಣವಾಗಿದೆ. ಮಹಿಳಾ ಅಧಿಕಾರಿಗಳೇ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ಆರಂಭವಾಗಿರುವುದು ಮಹಿಳಾ ಸಮಾನತೆಯ ಸಂಕೇತ ಎಂದು ಬಣ್ಣಿಸಿದರು.

ಇಂದಿನ ಶಿಕ್ಷಣ ಪದ್ದತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಳವಾಗಿರುವುದು ಶ್ಲಾಘನೀಯ ಕಾರ್ಯ. ಕಳೆದ 30 ವರ್ಷಗಳ ಅವಧಿಯಲ್ಲಿ ಮಹಿಳೆಯರು ಸಮಾಜದ ವಿವಿಧ ರಂಗಗಳಲ್ಲಿ ಅದ್ವಿತೀಯ ಸಾಧನೆಗೈದಿದ್ದಾರೆ. ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಬಡ ಜನರ ಕಣ್ಣೀರು ಹೊರೆಸುವ ಕಾಯಕದಲ್ಲಿ ನಿರತರಾಗಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ನಯನ ಸಚ್ಚಿದಾನಂದ, ಪ್ರತಿಯೊಬ್ಬರೂ ತಮ್ಮ ಜೀವನದ ಯಶಸ್ಸಿನ ದಾರಿ ಕ್ರಮಿಸಲು ಪಣತೊಡಬೇಕು. ನಮ್ಮ ಸಾಧನೆಗೆ ವಯಸ್ಸಿನ ಅಡ್ಡಿ ಎದುರಾಗಬಾರದು. ನಾನು ಮದುವೆಯಾದ ನಂತರ ನನ್ನ 30ನೇ ವಯಸ್ಸಿನಲ್ಲಿ ಕೆಎಎಸ್ ಅಧಿಕಾರಿಯಾಗಿ ರೂಪುಗೊಂಡಿದ್ದೇನೆ. ಅದೇ ರೀತಿ ಇಂದಿನ ಯುವ ಜನಾಂಗ ಸಾಧನೆ ದಿಕ್ಕಿನತ್ತ ಸಾಗಲು ಸಂಕಲ್ಪ ತೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ 597 ಅಂಕ ಗಳಿಸಿ ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಂದಿತಾ, ನಾಟ್ಯ ವಿದುಷಿ ಚೇತನಾ ರಾಧಾಕೃಷ್ಣ, ಸಾಹಿತಿ ಡಾ.ಶುಭಶ್ರೀ ಪ್ರಸಾದ್, ತತ್ವಪದ ಗಾಯಕಿ ಶತಾಯುಷಿ ಚನ್ನಮ್ಮ ಸಂಪಹಳ್ಳಿ ಸೇರಿದಂತೆ ಹಲವು ಸಾಧಕರನ್ನು ಅಭಿನಂದಿಸಲಾಯಿತು.

ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಯುವ ಮುಖಂಡ ಸಚ್ಚಿದಾನಂದ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಭಾನುಪ್ರಿಯ, ಎಸ್.ಎಲ್.ಲಿಂಗರಾಜು, ಮುಜುಬೀರ್ ಖಾನ್, ಹನಕೆರೆ ಶಶಿಕುಮಾರ್, ಅರವಿಂದ್ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!