ನಟ ದರ್ಶನ್ ಅವರ ಬಗ್ಗೆ ‘ಸುವರ್ಣ ನ್ಯೂಸ್’ ಸುದ್ದಿ ವಾಹಿನಿಯ ಸಿಬ್ಬಂದಿಗಳು ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ನೆಚ್ಚಿನ ನಟನ ಬಗ್ಗೆ ನಾಲಿಗೆ ಹರಿಬಿಟ್ಟವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿರುವ ದರ್ಶನ್ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಸುವರ್ಣ ನ್ಯೂಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಪ್ರತಿಭಟನಾಕಾರರನ್ನು ಹತ್ತಿಕ್ಕಲು ಲಾಠಿ ಚಾರ್ಜ್ ಮಾಡಿರುವ ಪೊಲೀಸರು ನಂತರ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
“> ‘ಸುವರ್ಣ ನ್ಯೂಸ್’ನಲ್ಲಿ ಹಿರಿಯ ಸುದ್ದಿ ನಿರೂಪಕರಾಗಿರುವ ಜಯಪ್ರಕಾಶ್ ಶೆಟ್ಟಿ ಇತ್ತೀಚೆಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಾವು ಕ್ರಿಸ್ಮಸ್ ಆಚರಣೆ ಸಂದರ್ಭದಲ್ಲಿ ಸಹೋದ್ಯೋಗಿಯೊಬ್ಬರಿಗೆ ಉಡುಗೊರೆ ನೀಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ವ್ಯಕ್ತಿಯೊಬ್ಬರು ಉಡುಗೊರೆಯ ಪೆಟ್ಟಿಗೆಯನ್ನು ತೆರೆಯುತ್ತಿರುವಾಗ ಪಕ್ಕದಲ್ಲಿದ್ದ ಮಹಿಳಾ ಉದ್ಯೋಗಿ ಕುತೂಹಲದಿಂದ, “ಕ್ರಾಂತಿ ಸಿನಿಮಾ ಟಿಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರಾ” ಎಂದು ಕೇಳಿದ್ದಾರೆ. ನಂತರ ಮತ್ತೊಬ್ಬ ವ್ಯಕ್ತಿ, “ದರ್ಶನ್ ತಲೆಯನ್ನು ಹಾಕಿ ಪಾರ್ಸಲ್ ಮಾಡಿ ಬಿಟ್ಟಿದ್ದಾರಾ” ಎಂದು ವಿಕೃತವಾಗಿ ವ್ಯಂಗ್ಯವಾಡಿದ್ದಾರೆ. ಸುವರ್ಣ ನ್ಯೂಸ್ ಕಚೇರಿಯ ಸಿಬ್ಬಂದಿ ದರ್ಶನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ನಟನ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಮ್ಮ ನೆಚ್ಚಿನ ನಟನ ಬಗ್ಗೆ ಕೆಟ್ಟದಾಗಿ ಮಾತನಾಡಿದವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ವಿವಾದ ತೀವ್ರಗೊಂಡ ಬೆನ್ನಲ್ಲೇ ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಜಯಪ್ರಕಾಶ್ ಶೆಟ್ಟಿ ಸೆಲ್ಫೀ ವಿಡಿಯೋ ಮೂಲಕ ಮಾತನಾಡಿ, “ನಮ್ಮ ಉದ್ದೇಶ ಯಾರನ್ನೂ ನೋಯಿಸುವುದಾಗಿರಲಿಲ್ಲ. ಯಾವುದೋ ಕೆಟ್ಟ ಘಳಿಗೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೋದಿಂದಾಗಿ ದರ್ಶನ್ ಅಭಿಮಾನಿಗಳಿಗೆ ನೋವಾಗಿದೆ. ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ” ಎಂದಿದ್ದರು. ಜಯಪ್ರಕಾಶ್ ಶೆಟ್ಟಿ ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಮೆ ಕೇಳಿದ್ದನ್ನು ಒಪ್ಪದ ದರ್ಶನ್ ಅಭಿಮಾನಿಗಳು ಇಂದು ‘ಸುವರ್ಣ ನ್ಯೂಸ್’ ಕಚೇರಿ ಎದುರು ಪ್ರತಿಭಟಿಸಿ, “ಮೊದಲಿಗೆ ಕೆಟ್ಟದಾಗಿ ಮಾತನಾಡಿ ಆಮೇಲೆ ಏನೂ ನಡದೇ ಇಲ್ಲ ಎಂಬಂತೆ ಕ್ಷಮೆ ಕೇಳಿ ಜಾರಿಕೊಳ್ಳುವ ನೀತಿಯನ್ನು ನಾವು ಒಪ್ಪುವುದಿಲ್ಲ” ಎಂದಿದ್ದಾರೆ. ಮಾಧ್ಯಮ ಸಂಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳೇ ಈ ರೀತಿ ನಡೆದುಕೊಂಡರೆ ಹೇಗೆ ಎಂದು ಪ್ರಶ್ನಿಸುತ್ತಿದ್ದು, “ದರ್ಶನ್ ವಿರುದ್ಧ ನಾಲಿಗೆ ಹರಿಬಿಟ್ಟವರು ಬಹಿರಂಗವಾಗಿ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.ಸುವರ್ಣ ನ್ಯೂಸ್ ಚಾನೆಲ್ ಆಫೀಸ್ ಗೆ #ಡಿಬಾಸ್ ಅಭಿಮಾನಿಗಳಿಂದ ಮುತ್ತಿಗೆ#ChallengingStarDarshan#DBoss #Kranti #D56@dasadarshan pic.twitter.com/rlpkpw3F4e
— Darshan Thoogudeepa Fans – CSDSK (@CSDSK1) February 4, 2023




