ದುಡಿದಿದ್ದೇಲ್ಲವು ನನಗೆ ಇರಲಿ ಎಂಬ ಸ್ವಾರ್ಥ ಭಾವನೆ ಹೆಚ್ಚಾಗಿರುವ ಇಂತಹ ಕಾಲಘಟ್ಟದಲ್ಲೂ ನಿರಂತರ ಸಮಾಜಸೇವೆಗೆ ನಿರತರಾಗಿರುವ ಕದಲೂರು ಉದಯ್ ಅವರ ನಿಸ್ವಾರ್ಥದ ಸಮಾಜಸೇವೆ ಶ್ಲಾಘನೀಯ ಎಂದು ಚಲನಚಿತ್ರ ನಟ ದರ್ಶನ್ ಹೇಳಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ‘ಸೇವಾ ಹೆಜ್ಜೆ ಮೂರರ ಸಂಭ್ರಮ’ ಹಾಗೂ ಉದಯಯಾನ – 20′ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ದುಡಿಯುವ ಶಕ್ತಿಗಳಿಗೆ ಕೆಲಸವಿಲ್ಲದಾಗಿದೆ, ಅದೇ ರೀತಿ ಶ್ರಮವು ಮರೆಯಾಗಿದೆ. ಇಂತಹ ಕಾಲಘಟ್ಟದಲ್ಲಿ ಚುನಾವಣೆ ನಂತರವು ನಿರಂತರ ಸಮಾಜಸೇವೆಯಲ್ಲಿ ನಿರತವಾಗಿರುವ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಕಾರ್ಯ ವೈಖರಿ ಸಾರ್ಥಕವಾಗಲಿ ಎಂದು ಹಾರೈಸಿದರು.
ಸಮಾಜದ ವಿವಿಧ ಕ್ಷೇತ್ರದ ಹಲವರ ಬದುಕಿಗೆ ಆಸರೆಯಾಗಲು ವಿತರಿಸುತ್ತಿರುವ ಸವಲತ್ತುಗಳ ಸದ್ಬಳಕೆಯಾಗಲಿ, ನಮ್ಮಂತಹ ಕಲಾವಿದರಿಗೆ ಪ್ರೀತಿ ಗೌರವ ನೀಡುವ ಕದಲೂರು ಉದಯ್ ಅವರು ಮಾತು ಕಡಿಮೆಯಾದರೂ ಸಮಾಜ ಒಪ್ಪುವ ಕಾಯಕದಲ್ಲಿ ಸಾಗುತ್ತಿದ್ದು, ಮತ್ತಷ್ಟು ಒಳಿತಾಗಲಿ ಎಂದರು.
ಚಿತ್ರನಟ ಚಿಕ್ಕಣ್ಣ ಮಾತನಾಡಿ, ಸಂಪತ್ತು ಇರುವುದು ದೊಡ್ಡದಲ್ಲ, ಇರುವುದನ್ನು ಅನ್ಯರಿಗೆ ಹಂಚವುದು ದೊಡ್ಡತನ ಆ ಕಾರ್ಯದಲ್ಲಿ ನಿರತವಾಗಿರುವ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮೂರರ ಸಂಭ್ರಮ ನೂರಕ್ಕೆ ವಿಸ್ತರಿಸಲಿ ಸಮಾಜಕ್ಕೆ ಮತ್ತಷ್ಟು ಒಳಿತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕೃಷಿ, ಹೈನುಗಾರಿಕೆ, ಸಾವಯವ ಕೃಷಿ, ರೇಷ್ಮೆ ಹಾಗೂ ಕರಕುಶಲ ವೃತ್ತಿಗಾರರನ್ನು ಅಭಿನಂದಿಸಲಾಯಿತು.
ಸಮಾಜಸೇವೆ ನಿರಂತರವಾಗಿ ಸಾಗಲಿದೆ
ವಿಧಾನಸಭಾ ಕ್ಷೇತ್ರದ ಜನತೆ ನಮ್ಮ ಸೇವೆಯನ್ನು ಒಪ್ಪಿ ಬಹುಮತದಿಂದ ನನಗೆ ಶಾಸಕ ಸ್ಥಾನದ ದೊಡ್ಡ ಗೌರವವನ್ನು ಕಲ್ಪಿಸಿಕೊಟ್ಟರು. ಅದೃಷ್ಟಕ್ಕೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನಮ್ಮ ಸಮಾಜಸೇವೆ ನಿರಂತರವಾಗಿ ಸಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಸೇವಾ ಹೆಜ್ಜೆ ಮೂರರ ಸಂಭ್ರಮ ಹಾಗೂ ಉದಯಯಾನ 20 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜಸೇವೆ ಮಾಡಬೇಕೆಂಬ ಅದಮ್ಯ ಆಸೆಯಿಂದ ಕಳೆದ 3 ವರ್ಷಗಳ ಹಿಂದೆ ಕರೋನಾ ಸಂಕಷ್ಟದ ವೇಳೆ ಟ್ರಸ್ಟ್ ಮೂಲಕ ಸೇವೆ ಆರಂಭಿಸಲಾಯಿತು, ಆ ಸಂದರ್ಭದಲ್ಲಿ ಬಹಳಷ್ಟು ಜನರು ನಮ್ಮ ಬಗ್ಗೆ ವ್ಯಾಪಕ ಟೀಕೆ ಮಾಡಿದರು. ಅದನ್ನು ಮನಸ್ಸಿಗೆ ಹಾಕಿಕೊಳ್ಳದೇ ನಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದೇವೆ, ಇದೇ ಸಾರ್ಥಕ ಕ್ಷಣ ಎಂದರು.
ಮಹಿಳೆಯರ ನಿರುದ್ಯೋಗ ಸಮಸ್ಯೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲವರಿಗೆ ಕಂಪನಿಗಳಲ್ಲಿ ಉದ್ಯೋಗ ಕೊಡಿಸಿದ್ದೇನೆ, ಇಂದು ಹಲವರಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತಿದೆ. ತೆಂಗಿನ ಮರವೇರಲು ಯಂತ್ರದ ಬಳಕೆಗೆ ಒತ್ತು ನೀಡಲು ಯಂತ್ರ ವಿತರಣೆ, ವಿದ್ಯಾರ್ಥಿಗಳ ಜ್ಞಾನಾರ್ಜನೆ ವೃದ್ದಿಗೆ ಲ್ಯಾಪ್ ಟಾಪ್ ಹಾಗೂ ಸರ್ಕಾರಿ ಶಾಲೆಯ ಅಡುಗೆ ಸಹಾಯಕಿಯರಿಗೆ ತಲಾ 2 ಜೊತೆ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದರು.
ಬರಗಾಲದ ಹಿನ್ನೆಲೆಯಲ್ಲಿ ಕೃಷಿಕರನ್ನು ಸಂಕಷ್ಟದಿಂದ ಹೊರ ತರಲು ಪಿಎಲ್’ಡಿ ಬ್ಯಾಂಕ್ ಸಾಲ ಮನ್ನಾ ಯೋಜನೆಗೆ ಒಳಪಟ್ಟ 136 ರೈತರಿಗೆ ಅಸಲು ಹಣ ಪಾವತಿ ಮಾಡಿ, ರೈತರು ಹಾಗೂ ಬ್ಯಾಂಕ್ ಅಭಿವೃದ್ದಿಗೆ ನಾಂದಿ ಹಾಡಲಾಗಿದೆ ಎಂದರು.
ಭಾರತೀನಗರ ವ್ಯಾಪ್ತಿಯ ನಾಗರೀಕರ ಮನವಿ ಮೇರೆಗೆ ಶವ ಸಂಸ್ಕಾರ ವಾಹನ ವಿತರಣೆ ಹಾಗೂ ಆಲಬೂಜನಹಳ್ಳಿ ಬಸವಪ್ಪನಿಗೆ ಬಸವರಥ ನೀಡಲಾಗುತ್ತಿದ್ದು, ನಮ್ಮ ಟ್ರಸ್ಟ್ ನ ಸಾಮಾಜಿಕ ಸೇವೆಗಳು ನಿರಂತರವಾಗಿ ಸಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಮಹಿಳೆಯರು, ಪುರುಷರು ಹಾಗೂ ಯುವಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ನೆಚ್ಚಿನ ಚಿತ್ರನಟ ದರ್ಶನ್ ಅವರನ್ನು ಕಾಣಲು ಬಿಸಿಲು ಲೆಕ್ಕಿಸದೇ ಭಾರೀ ಸಂಖ್ಯೆಯ ಜನಸಮೂಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.
ವೇದಿಕೆಯಲ್ಲಿ ಶಾಸಕ ಕದಲೂರು ಉದಯ್, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಬಸವರಾಜು, ಜಿ.ಪಂ. ಮಾಜಿ ಸದಸ್ಯ ಅಣ್ಣೂರು ರಾಜೀವ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ, ಉದ್ಯಮಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮುಖಂಡರಾದ ಸಿಪಾಯಿ ಶ್ರೀನಿವಾಸ್, ದಿನೇಶ್ ಬಾಬು, ರವಿ, ವಿನುತ ಉದಯ್ ಉಪಸ್ಥಿತರಿದ್ದರು.




