ಪ್ರತಿಯೊಬ್ಬರೂ ಕೂಡ ಡಿ ದೇವರಾಜು ಅರಸು ಅವರ ಚಿಂತನೆ ಹಾಗೂ ಆದರ್ಶಗಳನ್ನು ತಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸಲಹೆ ನೀಡಿದರು.
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಮಾಜಿಕ ಪರಿವರ್ತನೆಯ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆಯನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ ದೇವರಾಜು ಅರಸು ಅವರನ್ನು ಅವರು ಕೇವಲ ಒಬ್ಬ ರಾಜಕಾರಣಿ ಅಲ್ಲ ಆದರ್ಶ ವ್ಯಕ್ತಿತ್ವವುಳ್ಳವರು, ಅವರ ಚಿಂತನೆಯಲ್ಲಿ, ಸಮಾಜವಾದಿ ತತ್ವ, ಅಭಿವೃದ್ಧಿಪರ ಚಿಂತನೆ, ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಸುಧಾರಣೆಯಂತಹ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದವರು. ಅವರನ್ನು ಒಬ್ಬ ಮಹಾನ್ ಧೀಮಂತ ನಾಯಕ ಎಂದು ಕರೆಯಬಹುದು ಎಂದರು.

ಕರ್ನಾಟಕ ರಾಜ್ಯದಲ್ಲಿ ಸುಮಾರು 8 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅರಸು ಅವರು, ಕೇವಲ ರಾಜಕೀಯ ಚಿಂತನೆಯಲ್ಲದೆ ಕರ್ನಾಟಕ ರಾಜ್ಯಕ್ಕೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಥದ ಯೋಜನೆ ಹಾಕಿಕೊಟ್ಟಂತಹ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದವರು ಅರಸು. ಇಂದು ಕರ್ನಾಟಕ ರಾಜ್ಯದ ಸಂಭ್ರಮ 50ರ ಗಡಿ ದಾಟಿದ ಸಂಭ್ರಮದಲ್ಲಿ ನಾವಿದ್ದೇವೆ. 50 ವರ್ಷಗಳ ಹಿಂದೆ ಅವರು ಹಾಕಿ ಕೊಟ್ಟಿರುವ ಚಿಂತನೆಗಳು ಹಾಗೂ ಕೊಡುಗೆಗಳು ಇವತ್ತಿಗೂ ಪ್ರಸ್ತುತ. ಹೀಗಾಗಿ, ನಾವು ಅವರನ್ನು ಇಂದಿಗೂ ಪೂಜ್ಯ ಭಾವನೆಯಿಂದ ಕಾಣುತ್ತೇವೆ ಎಂದರು.
ದೇವರಾಜ ಅರಸುರವರ ಚಿಂತನೆಗಳು ಇಂದಿನ ಸಮಾಜಕ್ಕೆ ಅತ್ಯಾವಶ್ಯಕವಾಗಿದೆ. ಅಸಮಾನತೆ, ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ದೊರಕಿಸುವ ಮೂಲಕ ಅನೇಕ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಭೂ ಸುಧಾರಣೆ ಕಾಯ್ದೆಯು ಜಾರಿಗೆ ಬಂದಂತಹ ಸಂದರ್ಭದಲ್ಲಿ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ದಂತಹ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ ರಾಜ್ಯ. ಅಂದಿನ ಕಾಲಘಟ್ಟದಲ್ಲಿ ದೊಡ್ಡ ದೊಡ್ಡ ಭೂ ಹಿಡುವಳಿದಾರರು, ಜಮೀನ್ದಾರರು ಹಾಗೂ ಶ್ರೀಮಂತರ ವಿರೋಧ ಕಟ್ಟಿಕೊಂಡು ಭೂ ಮಾಲೀಕರ ಸ್ಥಾನದಲ್ಲಿ ಗೇಣಿದಾರರನ್ನು ಕೂರಿಸಿ ಬಡವರಿಗೆ ಸಹಾಯ ಮಾಡುವುದು ಅಷ್ಟು ಸುಲಭದ ಮಾತಗಿರಲಿಲ್ಲ. ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಬಡವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದರು ಎಂದು ಸ್ಮರಿಸಿ ದರು.
ಅರಸು ಅವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬಹಳ ಶ್ರಮಿಸಿದ್ದಾರೆ. ಹಿಂದುಳಿದ ವರ್ಗಗಳ ವಸತಿ ನಿಲಯಗಳನ್ನು ಮೊಟ್ಟ ಮೊದಲು ಇವರು ಸ್ಥಾಪನೆ ಮಾಡಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಇರಬೇಕು, ಗ್ರಾಮೀಣ ಪ್ರದೇಶದ ಮಕ್ಕಳು ಓದಿ ಉನ್ನತ ಸಾಧನೆ ಮಾಡಬೇಕು ಎಂಬ ನಿಟ್ಟಿನಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯವನ್ನು ಸ್ಥಾಪಿಸಿದರು. ಇಂದಿಗೂ ಅವರ ಹೆಸರಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಇಂದು ನಾನು ಈ ವೇದಿಕೆಯ ಮೇಲೆ ಜಿಲ್ಲಾಧಿಕಾರಿಯಾಗಿ ಮಾತನಾಡುತ್ತಿದ್ದೀನಿ ಎಂದರೆ ಅದಕ್ಕೆ ಬಹುಮುಖ್ಯ ಕಾರಣ ನಾನು ಓದಿ ಬೆಳೆದಂತಹ ಬಿಸಿಎಂ ಹಾಸ್ಟೆಲ್. ಏಕೆಂದರೆ ಒಂದು ವೇಳೆ ನನಗೆ ಬಿಸಿಎಂ ಹಾಸ್ಟೆಲ್ ನಲ್ಲಿ ಸೀಟು ಸಿಗದಿದ್ದರೆ, ಕಲಿಯುವ ಸೌಲಭ್ಯ ಇಲ್ಲದಿದ್ದರೆ, ನಾನು ಹಳ್ಳಿಯಿಂದ ಬಂದು ನಗರದಲ್ಲಿ ಓದಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇಡೀ ನನ್ನ ಶಿಕ್ಷಣವನ್ನು ನಾನು ಬಿಸಿಎಂ ಹಾಸ್ಟೆಲ್ ನಲ್ಲಿ ಪಡೆದಿದ್ದೇನೆ. ನಾನು ಈ ಹಾಸ್ಟೆಲ್ ಅನ್ನು ಕೇವಲ ಕಟ್ಟಡ ಎಂದು ನೋಡುವುದಿಲ್ಲ. ಅದೊಂದು ಜ್ಞಾನದ ದೇಗುಲ ಎಂದು ಭಾವಿಸುತ್ತಿದ್ದೆ ಎಂದರು.
ಮೈಸೂರು ವಿಶ್ವ ವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಹೆಚ್.ಎ ವೆಂಕಟೇಶ್ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳಾದ ಮೋಹನ್ ವಿ, ಕಾವ್ಯ ಅವರನ್ನು ಸನ್ಮಾನಿಸಲಾಯಿತು. ಕಳೆದ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳಾದ ನಿತಿನ್ ಎ, ಶ್ರೇಯಸ್ ಗೌಡ ಅವರನ್ನು ಸನ್ಮಾನಿಸಲಾಯಿತು.
ವಿವಿಧ ರೀತಿಯ ಕ್ರೀಡಾಕೂಟದಲ್ಲಿ ವಿಜೇತರಾದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಾದ ಪ್ರೀತಮ್ ಗೌಡ, ಮನೀಶ್ ಗೌಡ, ಪುಣ್ಯಶ್ರೀ, ಸೌಮ್ಯ, ಯಶಸ್ವಿನಿ, ಭೂಮಿಕಾ, ಮಧುಸೂದನ ವಿ, ಸ್ಪಂದನ ಅವರುಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಡಿ ದೇವರಾಜು ಅರಸು ವೇದಿಕೆ ಅಧ್ಯಕ್ಷರಾದ ಎಲ್ ಸಂದೇಶ್, ದೇವರಾಜು ಅರಸು ಪ್ರಗತಿ ಅಧ್ಯಕ್ಷರಾದ ವಿ.ಅಂಜನಪ್ಪ, ಜಿಲ್ಲಾ ಕೃಪಾಸಂಘದ ಅಧ್ಯಕ್ಷರಾದ ಎಮ್.ಎನ್ ಸುರೇಶ್, ಮುಡಾ ಸದಸ್ಯ ಎನ್ ದೊಡ್ಡಯ್ಯ, ವಿಶ್ವ ಕರ್ಮ ಜಿಲ್ಲಾ ಅಧ್ಯಕ್ಷರಾದ ಎಂ.ಡಿ ಸತೀಶ್, ಜಿಲ್ಲಾ ಮಡಿವಾಳ ಅಧ್ಯಕ್ಷರಾದ ಸಿದ್ದಶೆಟ್ಟಿ, ಹಿಂದುಳಿದ ವರ್ಗಗಳ ಮುಖಂಡ ರಮೇಶ್ ಸೇರಿದಂತೆ ವಿವಿಧ ಸಂಘಟನೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.




