ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಜಾಗ ಒತ್ತುವರಿ ಪ್ರಕರಣದಲ್ಲಿ ಹೈಕೋರ್ಟ್ ಅಡ್ವೊಕೇಟ್ ಜನರಲ್ ಮಧ್ಯಪ್ರವೇಶಿಸುವಂತೆ ಅಗತ್ಯ ಕ್ರಮವಹಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಯು ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿತು.
ಮಿಮ್ಸ್ ಗೆ ಸೇರಿದ 19 ಎಕರೆ ಭೂಮಿ ತಮಿಳು ಕಾಲೋನಿ ಸೇರಿದಂತೆ ಹಲವರು ಒತ್ತುವರಿ ಮಾಡಿಕೊಂಡಿದ್ದು, ತಮಿಳು ಕಾಲೋನಿ ಸೇರಿದಂತೆ ಒತ್ತುವರಿ ತೆರವುಗೊಳಿಸಲು ರಾಜ್ಯ ಹೈಕೋರ್ಟಿನ ದ್ವಿಸದಸ್ಯ ಪೀಠ ಆದೇಶ ಮಾಡಿ ಹತ್ತು ವರ್ಷಗಳೇ ಕಳೆದಿವೆ. ಪರಿಣಾಮ ಮಂಡ್ಯ ಮೆಡಿಕಲ್ ಕಾಲೇಜಿಗೆ ಸಿಗಬಹುದಾಗಿದ್ದ 50 ಹೆಚ್ಚುವರಿ ಮೆಡಿಕಲ್ ಸೀಟುಗಳನ್ನು ನೀಡಲು ರಾಷ್ಟ್ರೀಯ ಮೆಡಿಕಲ್ ಕೌನ್ಸಿಲ್ ನಿರಾಕರಿಸಿದೆ. ಇದಲ್ಲದೆ ಮೆಡಿಕಲ್ ಕಾಲಕಜು ವಾತವರಣ ದಿನೇ ದಿನೇ ಕಿಷ್ಕಂಧೆಯಾಗುತ್ತಿದೆ ಎಂದು ದೂರಿದರು.
ತಮಿಳು ವಾಸಿಗಳು ರಾಜ್ಯ ಹೈಕೋರ್ಟಿನಲ್ಲಿ ಏಕಪೀಠದೆದುರು ಹೊಸದೊಂದು ಪ್ರಕರಣ ದಾಖಲಿಸಿದ್ದು, ರಾಜ್ಯ ಹೈಕೋರ್ಟ್ ತೆರವುಗೊಳಿಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಎರಡು ವರ್ಷ ಕಳೆದಿದೆ. ಈ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಅಗತ್ಯ ಪ್ರಕ್ರಿಯೆ ನಡೆಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತುರ್ತು ಸ್ಥಿತಿ ಮನವರಿಕೆ ಮಾಡಿ ಒತ್ತುವರಿ ತೆರವುಗೊಳಿಸಲು ಹೈಕೋರ್ಟ್ ಅಡ್ವೊಕೇಟ್ ಜನರಲ್ ಮಧ್ಯಪ್ರವೇಶಿಸುವಂತೆ ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿದರು.




