ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ರಾಜಕೀಯವಾಗಿ ಸೂಕ್ತವಾದ ಸ್ಥಾನಮಾನವನ್ನು ಪ್ರಧಾನಿ ನರೇಂದ್ರಮೋದಿ ಅವರು ಕಲ್ಪಿಸಿಕೊಡುವ ಸಿಹಿಸುದ್ದಿ ಕೆಲವೇ ದಿನಗಳಲ್ಲಿ ಬರಲಿದೆ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ ನಗರದ ಗುತ್ತಲು ಸೃಷ್ಟಿ ಮಹಿಳಾ ಮಂಡಳಿ ಆವರಣದಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ರವರ ಜನ್ಮದಿನದ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಸಮಾರಂಭ ಹಾಗೂ ತೆಂಗಿನ ಗಿಡ ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಿ ಅವರು ಮಾತನಾಡಿದರು.
ದಿಶಾಸಭೆಯನ್ನು ರಾಷ್ಟ್ರದಲ್ಲಿ ಯಶಸ್ವಿಯಾಗಿ ನಡೆಸುವ ಮೂಲಕ ದೇಶದಲ್ಲಿಯೇ ಸಂಸದೆ ಸುಮಲತಾ ಅವರು ಎರಡನೇ ಸ್ಥಾನ ಪಡೆದಿದ್ದಾರೆ. ಸಾಕಷ್ಟು ಸವಾಲುಗಳನ್ನು ಮೆಟ್ಟಿನಿಂತಿ ಸುಮಲತಾ ಅವರು ಸಂಸದರಾಗಿ ಕೆಲಸ ಮಾಡಿ ಸಾಧನೆ ಮಾಡಿದ್ದಾರೆ. ಅನುದಾನ ಹಂಚುವಲ್ಲಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸುಮಲತಾ ಅಂಬರೀಶ್ ಅವರ ಮತ್ತಷ್ಟು ಸೇವೆ ಜಿಲ್ಲೆಗೆ ಲಭಿಸಲು ಜನರ ಆಶೀರ್ವಾದ ಬೇಕು ಎಂದು ಹೇಳಿದರು.
ಡಾ.ಮನೋಹರ್ ಸೇವೆ ಗ್ರಾಮೀಣರಿಗೆ ಲಭಿಸಲಿ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರ ಜನ್ಮದಿನದ ಪ್ರಯುಕ್ತ ಮಿಮ್ಸ್ ಹೆರಿಗೆ ವಿಭಾಗದ ಡಾ.ಮನೋಹರ್ ರವರ ಸೇವೆಯನ್ನ ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಡಾ.ಮನೋಹರ್ ರವರು ಮಂಡ್ಯ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಗರ್ಭಿಣಿ ಮಹಿಳೆಯರಿಗೆ ಸಿಜರಿನ್ ಹೆರಿಗೆ ಆಗುವುದನ್ನು ತಪ್ಪಿಸಿ, ನಾರ್ಮಲ್ ಹೆರಿಗೆ ಮಾಡಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಅವರ ಸೇವೆ ಮಿಮ್ಸ್ ಆಸ್ಪತ್ರೆಯಲ್ಲಿ ಇನ್ನಷ್ಟು ಗ್ರಾಮೀಣ ಜನರಿಗೆ ಲಭಿಸಲಿ ಎಂದು ಹೇಳಿದರು.
ಮಮತೆಯ ಮಡಿಲು ಸಂಸ್ಥೆಯ ಕೆ.ಪಿ.ಅರುಣ ಕುಮಾರಿ ಮಾತನಾಡಿ ಸಂಸದರಾಗಿ ಸುಮಲತಾ ಅಂಬರೀಶ್ ಅವರು ಅತ್ಯುತ್ತಮ ಕಾಳಜಿ ಹೊಂದಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ ಪಕ್ಷಗಳ ಹಿಂದೆ ಓಡಾಡುವವರಿಗೆ ಅವಕಾಶಗಳು ಸಿಗುವ ಸಂದರ್ಭದಲ್ಲಿ ಸಾಮಾನ್ಯರನ್ನು ಗುರುತಿಸಿ ದಿಶಾ ಸಮಿತಿ ಸಭೆಯಲ್ಲಿ ಸದಸ್ಯರಾಗಿ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟು ಮಂಡ್ಯ ಜಿಲ್ಲೆಯಲ್ಲಿ ಮಾದರಿ ಸಂಸದರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಮಿಮ್ಸ್ ಪ್ರಾಧ್ಯಾಪಕ ಡಾ.ಆರ್. ಮನೋಹರ್ ಹಾಗೂ ಗುತ್ತಲು ಸೃಷ್ಟಿ ಮಹಿಳಾ ಮಂಡಳಿ ಅಧ್ಯಕ್ಷೆ ಮಧು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗುತ್ತಲು ಸೊಸೈಟಿ ಮಾಜಿ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಬಿಜೆಪಿ ಮುಖಂಡ ಹನಿಯಂಬಾಡಿ ಸತೀಶ್, ಮುಖಂಡರಾದ ನಟೇಶ್, ಗಿರೀಶ್ ಸೇರಿದಂತೆ ಸೃಷ್ಟಿ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸುಮಲತಾ ಅಂಬರೀಷ್ ಅಭಿಮಾನಿಗಳು ಪಾಲ್ಗೊಂಡಿದ್ದರು




