Friday, October 18, 2024

ಪ್ರಾಯೋಗಿಕ ಆವೃತ್ತಿ

ದ್ವೇಷ ಭಾಷಣ| ಪ್ರಧಾನಿ ಮೋದಿ ವಿರುದ್ದ ನ್ಯಾಯಾಲಯದಲ್ಲಿ ದೂರು ದಾಖಲು

ಮುಸ್ಲಿಮರನ್ನು ‘ನುಸುಳುಕೋರರು’ ಎಂದು ಕರೆದಿದಲ್ಲದೆ, ಕಾಂಗೆಸ್‌ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ” ಎಂದು ಪ್ರಚೋದನಾಕಾರಿ ಚುನಾವಣಾ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖಾಸಗಿ ದೂರು ದಾಖಲಾಗಿದೆ.

ಬೆಂಗಳೂರಿನ ಹೆಬ್ಬಾಳದ ನಿವಾಸಿ 32 ವರ್ಷದ ಝಿಯಾವುರಹ್ಮಾನ್ ನೊಮಾನಿ ಮೇ 23ರಂದು ಖಾಸಗಿ ದೂರು ಸಲ್ಲಿಸಿದ್ದು,”ಪ್ರಧಾನಿಯ ಭಾಷಣವು ಮುಸ್ಲಿಮರನ್ನು ನಿಂದಿಸುವಂತಿದೆ. ಈ ದೇಶದ ಸಂಪತ್ತನ್ನು ಲೂಟಿ ಹೊಡೆದ ನುಸುಳುಕೋರರಿಗೆ ಇಲ್ಲಿರುವ ಮುಸ್ಲಿಮರನ್ನು ಹೋಲಿಕೆ ಮಾಡುವಂತೆ ಉಳಿದ ಜನರನ್ನು ಪ್ರೇರೇಪಿಸುವಂತಿದೆ. ಹಾಗಾಗಿ, ಸಮಾಜದಲ್ಲಿ ದ್ವೇಷ ಹರಡಿದ, ಶಾಂತಿ ಭಂಗ ಉಂಟು ಮಾಡಿದ ಆರೋಪದ ಮೇಲೆ ಮೋದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ಏಪ್ರಿಲ್ 21, 2024ರಂದು ರಾಜಸ್ಥಾನದ ಬನ್ಸ್ವಾರದಲ್ಲಿ ನಡೆದಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ, ಸಮಾಜ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ, ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಕ್ರಿಮಿನಲ್‌ ಪ್ರಚೋದನೆ ನೀಡುವ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ, 295ಎ, 503, 504, 505(2) ಅಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸಲು ಅಮೃತಹಳ್ಳಿ ಠಾಣಾ ಪೊಲೀಸರಿಗೆ ನಿರ್ದೇಶಿಸುವಂತೆ ಖಾಸಗಿ ದೂರಿನಲ್ಲಿ ಮನವಿ ಮಾಡಲಾಗಿದೆ.

ಪ್ರಧಾನಿ ಮೋದಿಯವರ ದ್ವೇಷ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಕಂಡಿದ್ದು, ಇದು ಪ್ರಕರಣದಲ್ಲಿ ಸಾಕ್ಷಿಯಾಗಿರುವ ಆರ್‌ ಕಲೀಮುಲ್ಲಾ ಅವರ ಗಮನಕ್ಕೂ ಬಂದಿದೆ. ಹೀಗಾಗಿ, ಏಪ್ರಿಲ್‌ 26ರಂದು ಅಮೃತಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಅಮೃತಹಳ್ಳಿ ಪೊಲೀಸರು ಇದು ಭಾರತೀಯ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಡುವುದರಿಂದ ಎಫ್‌ಐಆರ್‌ ದಾಖಲಿಸಲಾಗದು ಎಂದು ಹಿಂಬರಹ ನೀಡಿದ್ದರು. ಇದಾದ ಬಳಿಕ ಏಪ್ರಿಲ್‌ 27ರಂದು ದೂರುದಾರ ನೊಮಾನಿ ಈಮೇಲ್‌ ಮೂಲಕ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು. ಅಲ್ಲಿಂದಲೂ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆ ಮೇ 23ರಂದು ನ್ಯಾಯಾಲಯದ ಮೆಟ್ಟಿಲೇರಲಾಗಿದೆ ಎಂದು ಖಾಸಗಿ ದೂರಿನಲ್ಲಿ ವಿವರಿಸಲಾಗಿದೆ. ಪ್ರಕರಣದ ವಿಚಾರಣೆ ಮೇ 28ಕ್ಕೆ ನಿಗದಿಯಾಗಿದೆ.

ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್ವಾರದಲ್ಲಿ ನಡೆದಿದ್ದ ಬಿಜೆಪಿಯ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ, “ನಮ್ಮ ತಾಯಂದಿರು, ಸಹೋದರಿಯರ ಬಂಗಾರದ ಲೆಕ್ಕ ಹಾಕುವುದಾಗಿ, ಅದರ ಬಗ್ಗೆ ಮಾಹಿತಿ ಪಡೆಯುವುದಾಗಿ, ನಂತರ ಸಂಪತ್ತನ್ನು ಮರು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆ ಹೇಳುತ್ತದೆ. ಅದನ್ನು ಯಾರಿಗೆ ಹಂಚುತ್ತಾರೆ? ಮುಸ್ಲಿಮರು ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಎಂದು ಮನಮೋಹನ್‌ ಸಿಂಗ್‌ ಸರ್ಕಾರ ಹೇಳಿತ್ತು. ಅದರ ಅರ್ಥ, ಹೆಚ್ಚು ಮಕ್ಕಳಿರುವವರಿಗೆ ನಿಮ್ಮ ಸಂಪತ್ತು ಹಂಚಿಕೆಯಾಗುತ್ತದೆ. ನುಸುಳುಕೋರರಿಗೆ ನಿಮ್ಮ ಸಂಪತ್ತು ಹಂಚಿಕೆಯಾಗುತ್ತದೆ. ನೀವು ಕಷ್ಟದಿಂದ ಸಂಪಾದಿಸಿದ ಹಣ ನುಸುಳುಕೋರರ ಪಾಲಾಗಬೇಕೆ? ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ಎಂದಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!