ಕೃಷ್ಣರಾಜಸಾಗರ(ಕೆ.ಆರ್.ಎಸ್) ಜಲಾಶಯದ ವಿಶ್ವೇಶ್ವರಯ್ಯ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಹಾಲಿ ಬೆಳೆದು ನಿಂತಿರುವ ಕಬ್ಬಿನ ಬೆಳೆಗಳಿಗೆ ಜ.11, 2023 ರಿಂದ ಮೇ.29, 2023ರವರೆಗೆ ಕಟ್ಟು ಪದ್ದತಿಯಲ್ಲಿ ನೀರು ಬಿಡುಗಡೆ ಮಾಡಲಾವುದು ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕರ ಇಂಜಿನಿಯರ್ ಆನಂದ್ ಹೆಚ್ ತಿಳಿಸಿದ್ದಾರೆ.
ಕಟ್ಟು ಪದ್ಧತಿಯಲ್ಲಿ ಅಂದರೆ, ಪ್ರತಿ ತಿಂಗಳಲ್ಲಿ 18 ದಿನಗಳ ಕಾಲ ನಾಲೆಗಳಲ್ಲಿ ನೀರನ್ನು ಹರಿಸಿ, ಮುಂದಿನ 12 ದಿನಗಳು ನಾಲೆಗಳಲ್ಲಿ ನೀರನ್ನು ನಿಲ್ಲಿಸಲಾಗುವುದು ಎಂದು ತಿಳಿಸಿರುವ ಅವರು, ವಿ.ಸಿ.ನಾಲೆ ಅಚ್ಚುಕಟ್ಟು ಪ್ರದೇಶದ ರೈತರು ಹೊಸದಾಗಿ ಭತ್ತದ ಬೆಳೆ ಹಾಗೂ ಇನ್ನಿತರ ಬೆಳೆಗಳನ್ನು ಹಾಕದೇ, ಬೆಳೆದು ನಿಂತಿರುವ ಕಬ್ಬಿನ ಬೆಳೆಗಳಿಗೆ ಮಾತ್ರ ನೀರನ್ನು ಮಿತ ಬಳಕೆಯಲ್ಲಿ ಉಪಯೋಗಿಸಲು ಮನವಿ ಮಾಡಿದ್ಧಾರೆ.
ಯಾವುದೇ ಹೊಸ ಬೆಳೆಗಳನ್ನು ಬೆಳೆದು ನೀರಿನ ಕೊರತೆಯಿಂದ ಹಾನಿಯಾದಲ್ಲಿ ನೀರಾವರಿ ಇಲಾಖೆ ಹೊಣೆಯಾಗುವುದಿಲ್ಲ, ವಿಶ್ವೇಶ್ವರಯ್ಯ ನಾಲಾ ಜಾಲದ ಮುಖ್ಯ ನಾಲೆ, ಶಾಖಾ ನಾಲೆಗಳಲ್ಲಿ ಮಾತ್ರ 18 ದಿನಗಳ ಕಾಲ ನೀರನ್ನು ಹರಿಸಿ ವಿತರಣಾ ನಾಲೆ ಮತ್ತು ಉಪ ನಾಲೆಗಳಲ್ಲಿ ನಿಗಧಿತ ಅವಧಿಗೆ ಅವಶ್ಯಕತೆಗೆ ತಕ್ಕಂತೆ ನೀರನ್ನು ಹರಿಸಲಾಗುವುದು ಎಂದು ಅವರು ತಿಳಿಸಿದ್ಧಾರೆ.
ನೀರು ಹರಿಸಲಾಗುವ ನಾಲೆಗಳು
1. ವಿಶ್ವೇಶ್ವರಯ್ಯ ನಾಲೆ – ಮುಖ್ಯ ನಾಲೆ ಮತ್ತು 14ನೇ ಮೈಲಿಯ ವಿತರಣಾ ನಾಲೆ (ಸಂಪರ್ಕ ನಾಲೆ ಹೊರತುಪಡಿಸಿ)
2. ಎಡದಂಡೆ ಮತ್ತು ಬಲದಂಡೆ ಕೆಳ ಮಟ್ಟದ ನಾಲೆಗಳು
3. ಕಾವೇರಿ ಶಾಖಾ ನಾಲೆ ಮತ್ತು ಹಳೆ ಮದ್ದೂರು ಶಾಖಾ ನಾಲೆ
4. ಶಿಂಷಾ ನಾಲೆ (ನಿಗಧಿತ ಪ್ರದೇಶಕ್ಕೆ ಮತ್ತು ನಿಗಧಿತ ಅವಧಿಗೆ ಅವಶ್ಯಕತೆಗೆ ತಕ್ಕಂತೆ ಮಾತ್ರ)
5.ಕೆರಗೋಡು ಶಾಖಾ ನಾಲೆ ( 21ವಿತರಣಾ ನಾಲೆವರೆಗೆ)
6. ಹೊಸ ಮದ್ದೂರು ಶಾಖಾ ನಾಲೆ (31ನೇ ವಿತರಣಾ ನಾಲೆವರೆಗೆ)
7.ಲೋಕಸರ ಶಾಖಾ ನಾಲೆ
8.ತುರಗನೂರು ಶಾಖಾ ನಾಲೆ ( 5ನೇ ವಿತರಣಾ ನಾಲೆವರೆಗೆ)
9.ಹೆಬ್ಬಕವಾಡಿ ಶಾಖಾ ನಾಲೆ (14ನೇ ವಿತರಣಾ ನಾಲೆವರೆಗೆ)
ನೀರು ಹರಿಸುವ ದಿನಾಂಕಗಳು
ಜ.11ರಿಂದ ಜ.29, ಫೆ.10ರಿಂದ ಫೆ.28, ಮಾ.12ರಿಂದ ಮಾ.30, ಏ.11ರಿಂದ ಏ.29 ಹಾಗೂ ಮೇ.15ರಿಂದ ಮೇ.29ರವರೆಗೆ ನಾಲೆಗಳಲ್ಲಿ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮವು ಮಾಹಿತಿ ನೀಡಿದೆ.




