ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಾವಿತ್ರಮ್ಮ ಗೋವಿಂದಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾದ ಭಾಗ್ಯಮ್ಮ ನಂಜುಂಡಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸಾವಿತ್ರಮ್ಮ ಹೊರತು ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್, ಸಹ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷೆ ಸಾವಿತ್ರಮ್ಮ ಮಾತನಾಡಿ, ಎಲ್ಲಾ ಸದಸ್ಯರು ಹಾಗೂ ಮುಖಂಡರು ನನ್ನನ್ನು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲಾ ಸದಸ್ಯರು ಹಾಗೂ ನೌಕರರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಪಂಚಾಯಿತಿಯ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾವಿತ್ರಮ್ಮ ಗೋವಿಂದಶೆಟ್ಟಿ ಅವರನ್ನು ಜೆಡಿಎಸ್ ಮುಖಂಡ ಹೆಚ್.ಟಿ.ಮಂಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಮಾಜಿ ತಾ.ಪಂ.ಸದಸ್ಯ ಮಲ್ಲೇನಹಳ್ಳಿ ಮೋಹನ್, ಮುಖಂಡರಾದ ಬಿ.ವಿ.ನಾಗೇಶ್, ಹರೀನಹಳ್ಳಿ ರಘು, ಪಟೇಲ್ ನಾಗೇಗೌಡ, ರಾಮಕೃಷ್ಣೇಗೌಡ, ತಾ.ಪಂ.ಮಾಜಿ ಅಧ್ಯಕ್ಷರಾದ ವಿ.ಎನ್.ಮಹದೇವೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ್, ಮಾಜಿ.ಪಂ. ಸದಸ್ಯ ಎ.ಬಿ.ಕುಮಾರ್, ಫಯಾಜ್ ಉಲ್ಲಾಖಾನ್, ರಮಾನಂದ ಮತ್ತಿತರರು ಅಭಿನಂದಿಸಿದರು.