Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅ.17ಕ್ಕೆ ತಡಗವಾಡಿಯಲ್ಲಿ ಕೃಷಿ ವಸ್ತು ಪ್ರದರ್ಶನ

ಮದ್ದೂರು ತಾಲ್ಲೂಕಿನ ಗಡಿ ಗ್ರಾಮ ಕೆ.ಬಿ.ದೊಡ್ಡಿಯ ಸಂಪೂರ್ಣ ಕೃಷಿ ವಿದ್ಯಾಸಂಸ್ಥೆ ವತಿಯಿಂದ ಶ್ರಿರಂಗಪಟ್ಟಣ ತಾಲ್ಲೂಕಿನ ತಡಗವಾಡಿಯಲ್ಲಿ ಅ.12ರಂದು ಬೆಳೆ ಕ್ಷೇತ್ರೋತ್ಸವ ಹಾಗೂ ಅ.17ರಂದು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಡೀನ್ ಡಾ.ಬಿ.ಎನ್. ಜ್ಞಾನೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪೂರ್ಣ ಅಂತರ ರಾಷ್ಟ್ರೀಯ ಕೃಷಿ ಮತ್ತು ತೋಟಗಾರಿಕೆ ತಂತ್ರಜ್ಞಾನ ಮಹಾವಿದ್ಯಾಲಯವು ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ತಡಗವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, 25 ಮಂದಿ ಕೃಷಿ ಬಿಎಸ್ಸಿ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಗ್ರಾಮದಲ್ಲಿ ವಾಸ್ತವ್ಯವಿದ್ದು, ಗ್ರಾಮೀಣ ಬದುಕಿನ ಜೀವನ ಶೈಲಿ ಹಾಗೂ ಕೃಷಿ ಪದ್ಧತಿಯ ನೈಜ್ಯತೆ ಅರಿಯಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರೋತ್ಸವದಲ್ಲಿ 5ನೇ ಬ್ಯಾಚಿನ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ರೈತರ ಮಕ್ಕಳಿಗೆ ನಮ್ಮ ಕಾಲೇಜು ವರದಾನವಾಗಿದ್ದು, ವಿವಿಧ ಸಿರಿಧಾನ್ಯಗಳು, ಔಷಧಿಯ ಬೆಳೆಗಳು, ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ ಇರಲಿದ್ದು ಈ ಬೆಳೆಗಳ ಬಗ್ಗೆ ವಿದ್ಯಾರ್ಥಿಗಳು ರೈತರಿಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದಾರೆಂದು ವಿವರಿಸಿದರು.

ಹಿರಿಯ ಪ್ರಾಧ್ಯಾಪಕ ಡಾ.ಭೈರೇಗೌಡ ಮಾತನಾಡಿ, ನಮ್ಮ ಕಾಲೇಜಿನ ನೆರೆ-ಹೊರೆ ಗ್ರಾಮಗಳ ರೈತರಿಗೆ ಸಲಹೆ ಸಹಕಾರ ನೀಡಲಾಗುತ್ತಿದೆ, 80 ಎಕರೆ ವಿಶಾಲವಾದ ಜಮೀನಿನಲ್ಲಿ ಪರಿಸರ ಸ್ನೇಹಿ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ, ತೆಂಗು ಬೆಳೆಗೆ ತಗುಲಿರುವ ನುಸಿಪೀಡೆ ರೋಗ ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಲಹೆ ನೀಡಲಾಗುತ್ತಿದೆ ಎಂದರು.

ವಿಷಮುಕ್ತ ಆಹಾರ ಉತ್ಪಾದನೆಗೆ ಒತ್ತು ನೀಡುವ ಸದುದ್ದೇಶದಿಂದ ತಡಗವಾಡಿ ಗ್ರಾಮದ ರೈತರೊರ್ವರ ಅರ್ಧ ಎಕರೆ ಜಮೀನಿನಲ್ಲಿ 9 ಬಗೆಯ ಸಿರಿಧಾನ್ಯ, 7 ಬಗೆಯ ದ್ವಿದಳ ಧಾನ್ಯ, 4 ಬಗೆಯ ಎಣ್ಣೆಕಾಳುಗಳು, 13 ವಿವಿಧ ತರಕಾರಿಗಳ ಪ್ರಾತ್ಯಕ್ಷಿಕೆ ಜೊತೆ 17 ಔಷಧಿ ಸಸ್ಯಗಳ ಮಾಹಿತಿಯನ್ನು ರೈತರು ಹಾಗೂ ಜನಸಾಮಾನ್ಯರಿಗೆ ಕೃಷಿ ವಸ್ತು ಪ್ರದರ್ಶನದಲ್ಲಿ ನೀಡಲಾಗುವುದೆಂದು ಸಂಪೂರ್ಣ ಕೃಷಿ ವಿದ್ಯಾಸಂಸ್ಥೆಯ ಸಹ ಪ್ರಾಧ್ಯಾಪಕಿ ಡಾ.ಸುಧಾ ತಿಳಿಸಿದರು.

ಕೃಷಿ ವಸ್ತು ಪ್ರದರ್ಶನದಲ್ಲಿ 12 ಸ್ಟಾಲ್ ಗಳು ನಿರ್ಮಾಣವಾಗಲಿದ್ದು, ರೈತರಿಗೆ ಸಲಹೆ ಸಹಕಾರ ನೀಡುವ ಜೊತೆಗೆ ಅ.13ರಂದು ಜಾನುವಾರುಗಳ ತಪಾಸಣಾ ಶಿಬಿರ ಆಯೋಜಿಸಲಾಗುಗುತ್ತಿದೆ ಎಂದರು.

4 ವರ್ಷದ ಅವಧಿಯಲ್ಲಿ 8 ಸೆಮಿಸ್ಟರ್ ಗಳ ಕೃಷಿ ಪದವಿ ಪಡೆಯುವ ವಿದ್ಯಾರ್ಥಿಗಳ ಕೌಶಲ್ಯವೃದ್ದಿ ಹಾಗೂ ರೈತರು ಮತ್ತು ವಿದ್ಯಾರ್ಥಿಗಳು ತಂತ್ರಜ್ಞಾನದ ವಿನಿಮಯಕ್ಕೆ ಮುಂದಾಗಲಿದ್ದು, ಭವಿಷ್ಯದ ಕೃಷಿ ತಜ್ಞರನ್ನು ಸಜ್ಜುಗೊಳಿಸಲು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಎರೆಹುಳು ಗೊಬ್ಬರ ಉತ್ಪಾದನೆ, ಕೆಮಿಕಲ್ ಬಳಕೆ ಬಗ್ಗೆ ಜಾಗೃತಿ, ಸಾವಯವ ಕೃಷಿ ಬಗ್ಗೆ ಅರಿವು, ಕ್ರಿಪ್ಕೊ ಹಾಗೂ ಹಿಪ್ಕೋ ಕಂಪನಿಗಳ ಉತ್ಪಾದನೆಗಳ ಬಗ್ಗೆ ಪರಿಚಯ, ಸಿರಿಧಾನ್ಯ ಬಳಸಿ ತಯಾರಿಸಿರುವ 50 ವಿವಿಧ ತಿನಿಸುಗಳ ಪ್ರದರ್ಶನವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!