Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೃಷಿ ಲಾಭದಾಯಕವಾಗಲು ಉಪಕಸುಬುಗಳು ಅಗತ್ಯ : ಡಾ.ಎಸ್.ವಿ.ಸುರೇಶ್

ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿಸಲು ಉಪಕಸುಬುಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯ ‌ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ತಿಳಿಸಿದರು

ಮಂಡ್ಯದ ಕೃಷಿ ಮಹಾವಿದ್ಯಾಲಯದ ವತಿಯಿಂದ ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂನಲ್ಲಿ ಅಂತಿಮ ವರ್ಷದ ಬಿ.ಎಸ್ಸಿ,  ಕೃಷಿ ಹಾಗೂ ಡಿಪ್ಲೋಮಾ (ಕೃಷಿ) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ನಡೆದ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ರೈತರು ಬಹಳ ಆಸಕ್ತಿಯನ್ನು  ತೋರುತ್ತಿರುವುದು ಬಹಳ ಹೆಮ್ಮೆಯ ವಿಚಾರ. ಬೇಸಾಯ ಬಹಳ ಕಷ್ಟಕರವಾಗುತ್ತಿದೆ, ಬೇಸಾಯ ಲಾಭದಾಯಕವಾಗುತ್ತಿಲ್ಲ. ಹಳ್ಳಿಗಳು ವೃದ್ಧಾಶ್ರಮವಾಗಿಬಿಡುತ್ತದೆ ಎಂಬ ಭಯ ಕಾಡುತ್ತಿದೆ.  ಕೃಷಿಯನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ, ಯುವ ಪಡೆ ನಗರದತ್ತ ಮುಖ ಮಾಡುತ್ತಿರುವುದು ಕೃಷಿಯ ಮೇಲೆ ಬಹಳ ಪರಿಣಾಮ ಬೀರುತ್ತಿದೆ ಎಂದರು

ವಲಸೆ ಹೋಗುತ್ತಿರುವ ಜನರನ್ನ ಕೃಷಿಯ ಕಡೆಗೆ ಆಕರ್ಷಿತರನ್ನಾಗಿ ಮಾಡಬೇಕು, ಕೃಷಿಯಲ್ಲಿಯು ಜೀವನವನ್ನು ಕಟ್ಟಿಕೊಳ್ಳಬಹುದು ಎಂಬ ಭಾವನೆಯನ್ನು ತರಸಬೇಕಾದದ್ದು ಕೃಷಿ ಅಭಿವೃದ್ಧಿಯಲ್ಲಿ ನಿರತರಾಗಿರುವ ಎಲ್ಲಾ ಕೃಷಿ ವಿಜ್ಞಾನಿಗಳು, ಕೃಷಿ ವಿಸ್ತರಣಾ ಕಾರ್ಯಕರ್ತರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕೃಷಿ ವಿಷಯಗಳಲ್ಲಿ ಏನೇ ಕೆಲಸಗಳಾಗುತ್ತಿದ್ದರೂ ಕೃಷಿ ಲಾಭಾದಾಯಕ ಕೆಲಸವೆಂದರೆ ಬಹಳಷ್ಟು ಜನ ಒಪ್ಪಿಕೊಳ್ಳಲ್ಲ. ಕೃಷಿ ಕಾಲೇಜಿನ ವಿಧ್ಯಾರ್ಥಿಗಳು 3 ತಿಂಗಳ ಕಾಲ ಮಂಡ್ಯ ಜಿಲ್ಲೆಯ ಮಾರಗೌಡನ ಹಳ್ಳಿಯಲ್ಲಿದ್ದು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ರೈತರ ಜೀವನ ಯಾವ ರೀತಿ ಇದೆ, ಅವರ ಕೃಷಿ ಹೇಗೆ ನಡೆಯುತ್ತಿದೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಬರುತ್ತಿರುವ ಕುಂದು ಕೊರತೆಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ರೈತರ ಕಷ್ಟವನ್ನು ಹೇಗೆ ಅವರು ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ, ಇದಕ್ಕೆ ವಿಶ್ವವಿದ್ಯಾನಿಲಯಗಳು ಯಾವ ರೀತಿ ರೈತರೊಂದಿಗೆ ಕೈಜೋಡಿಸಬೇಕು ಎಂಬ ಸಮಸ್ಯೆಯನ್ನು ಸಹ ಅಧ್ಯಯನ ಮಾಡಿ, ರೈತರುಗಳೊಂದಿಗೆ ಒಡನಾಟ ಮಾಡಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು ಅವರ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡಿ, ಅದನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ನಮ್ಮ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅವರಿಗೆ ತಿಳಿ ಹೇಳುವ ಉದ್ದೇಶಕ್ಕಾಗಿಯೇ ಮೂರು ತಿಂಗಳುಗಳ ಕಾಲ ಮಕ್ಕಳನ್ನು ರೈತರ ಒಟ್ಟಿಗೆ ಬಿಟ್ಟಿದ್ದೇವು ಎಂದರು.

ಕೃಷಿ ಕಾಲೇಜಿನ ವಿದ್ಯಾರ್ಥಿಗಳು 3 ತಿಂಗಳಲ್ಲಿ  ಹಳ್ಳಿಗಳಲ್ಲಿನ ಸಮಸ್ಯೆಗಳೇನು ಎಂದು ತಿಳಿದುಕೊಂಡು, ಕೆಲವು ವಿಷಯಗಳನ್ನು ಕುರಿತು 16 ರಿಂದ 18 ಮಳಿಗೆಗಳಲ್ಲಿ ವಿಶ್ಲೇಷಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಷ್ಟ ಪಟ್ಟು ವಿಷಯಗಳನ್ನು ರೈತರಿಂದ ಹೊರಗೆ ತೆಗೆದು ಪ್ರದರ್ಶಿಸುತ್ತಿದ್ದಾರೆ, ಎಂದರೇ ಹಳ್ಳಿಯ ರೈತನ ಬದುಕು ಏನೆಂದು ಮಕ್ಕಳಿಗೆ ಅರ್ಥವಾಗುತ್ತಿದೆ. ಮಕ್ಕಳೊಂದಿಗೆ ಎಲ್ಲರೂ ಸಹ ಹೊಂದಿ ಕೊಂಡಿದ್ದಾರೆ, ಗ್ರಾಮದಲ್ಲಿ ಎಲ್ಲರ ಒಗ್ಗಟ್ಟನ್ನು ನೋಡಿ ಬಹಳ ಖುಷಿಯಾಯಿತು ಎಂದರು.

ಕೃಷಿ ಘಟಕದಲ್ಲಿ ಶೇ.80 ರಷ್ಟು ಕಾರ್ಯ ಚಟುವಟಿಕೆಗಳನ್ನು ಕೃಷಿ ಮಹಿಳೆಯರೆ ಮಾಡುತ್ತಿದ್ದಾರೆ. ಮಹಿಳೆಯರು ಮನೆಯನ್ನು ನೋಡಿಕೊಳ್ಳುವುದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಾ ಸಾಕಷ್ಟು ಉಪಕಸುಬುಗಳನ್ನು ಹಳ್ಳಿಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಹಿರಿಯ ರೈತ ಮುಖಂಡರಿಗರ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡೀನ್ (ಕೃಷಿ), ಡಾ.ಎಸ್.ಎಸ್.ಪ್ರಕಾಶ್, ಸಹ ‌ ನಿರ್ದೇಶಕ ಡಾ.ಎನ್.ಶಿವಕುಮಾರ್, ಸಹ ವಿಸ್ತರಣಾ ನಿರ್ದೇಶಕ ಡಾ.ಡಿ ರಘುಪತಿ, ಡಿಪ್ಲೊಮಾ (ಕೃಷಿ) ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪಿ.ಎಸ್.ಫಾತಿಮಾ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಟಿ.ನರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!