Friday, September 20, 2024

ಪ್ರಾಯೋಗಿಕ ಆವೃತ್ತಿ

ಚುನಾವಣಾ ಸೋಲು| ಪಕ್ಷ ಬಲವರ್ಧನೆಯ ಸಂಕಲ್ಪ ಮಾಡಿದ ಎಐಸಿಸಿ ಅಧ್ಯಕ್ಷ ಖರ್ಗೆ

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ ತೆಲಂಗಾಣದಲ್ಲಿ ಮಾತ್ರ ಸರಕಾರ ರಚಿಸುವಲ್ಲಿ ಬಹುಮತವನ್ನು ಪಡೆದುಕೊಂಡಿದೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷೆಗಿಂತ ಹೆಚ್ಚಿನ ಹಿನ್ನೆಡೆಯಾಗಿದ್ದು, ಕಾಂಗ್ರೆಸ್‌ಗೆ ಅವಲೋಕನ ಮಾಡುವಂತೆ ಮಾಡಿದೆ.

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಎಲ್ಲಾ 4 ರಾಜ್ಯಗಳ ಜನತೆಗೆ ಧನ್ಯವಾದಗಳು. ನಾವು ತಾತ್ಕಾಲಿಕ ಹಿನ್ನಡೆಯನ್ನು ನಿವಾರಿಸುತ್ತೇವೆ. ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ಗೆಲುವನ್ನು ಸಾಧಿಸಲು ಮತ್ತು ಛತ್ತೀಸ್‌ಗಢ ಮತ್ತು ರಾಜಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಆಶಿಸುತ್ತಿತ್ತು. ಆದರೆ ಫಲಿತಾಂಶವು ಉಲ್ಟಾ ಹೊಡೆದಿದೆ. ತೆಲಂಗಾಣದಲ್ಲಿ ಒಂದು ದಶಕದಿಂದ ಅಧಿಕಾರದಲ್ಲಿದ್ದ ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ.

ನಾವು ಅವರಿಂದ ಪಡೆದ ಜನಾದೇಶಕ್ಕಾಗಿ ತೆಲಂಗಾಣ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಮಗೆ ಮತ ಹಾಕಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು  ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಮೂರು ರಾಜ್ಯಗಳಲ್ಲಿ ನಮ್ಮ ಸಾಧನೆ ನಿರಾಶಾದಾಯಕವಾಗಿರುವುದರಲ್ಲಿ ಸಂಶಯವಿಲ್ಲ, ಆದರೆ  ಮೂರು ರಾಜ್ಯಗಳಲ್ಲಿ ನಮ್ಮ ಪಕ್ಷವನ್ನು ಬಲಪಡಿಸಲು ಬಲವಾದ ಸಂಕಲ್ಪವನ್ನು ನಾವು ಪುನರುಚ್ಚರಿಸುತ್ತೇವೆ. ನಾವು ತಾತ್ಕಾಲಿಕ ಹಿನ್ನಡೆಗಳನ್ನು ನಿವಾರಿಸುತ್ತೇವೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ನಮ್ಮನ್ನು ಸಂಪೂರ್ಣವಾಗಿ ಸಿದ್ಧಪಡಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ  INDIA ಮೈತ್ರಿ ಪಕ್ಷಗಳು ಕಾಂಗ್ರೆಸ್‌ನ್ನು ಟೀಕಿಸಿದ್ದು, ಟಿಎಂಸಿ ಪಕ್ಷವು ಕಾಂಗ್ರೆಸ್‌  ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದೆ. ಇದು ಬಿಜೆಪಿಯ ಯಶಸ್ಸಲ್ಲ, ಇದು ಕಾಂಗ್ರೆಸ್‌ನ ಸಂಪೂರ್ಣ ವೈಫಲ್ಯ ಎಂದು ತೃಣಮೂಲ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಜಮೀನ್‌ದಾರಿ ಮನಸ್ಥಿತಿಯಿಂದ ಹೊರಬರಬೇಕು ಮತ್ತು ಮಮತಾ ಬ್ಯಾನರ್ಜಿಯಂತಹ ಇತರ ಹಿರಿಯ ನಾಯಕರ ಅನುಭವವನ್ನು ಕೇಳಿಕೊಂಡು ಕಾರ್ಯಗತಗೊಳಿಸಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್‌ಗೆ ಬಿಜೆಪಿಯೊಂದಿಗೆ ಸ್ಪರ್ಧೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕಾಂಗ್ರೆಸ್ ಈ ಸಿಂಡ್ರೋಮ್‌ನಿಂದ ಹೊರಬರಬೇಕಾಗಿದೆ ಎಂದು ಜನತಾದಳ ಯುನೈಟೆಡ್‌ನ ಹಿರಿಯ ನಾಯಕ ಕೆ.ಸಿ.ತ್ಯಾಗಿ ಹೇಳಿದ್ದಾರೆ. ಕಾಂಗ್ರೆಸ್ ಈಗಾಗಲೇ ಇಂಡಿಯಾ ಮೈತ್ರಿಕೂಟದ ಘಟಕ ಪಕ್ಷಗಳಿಂದ ಸಾಕಷ್ಟು ದೂರ ಸರಿದಿದೆ. ಕಾಂಗ್ರೆಸ್ ಪಕ್ಷವು ಡಿ.6ರಂದು ಕರೆದಿರುವ ಮೈತ್ರಿಕೂಟದ ಸಭೆಯನ್ನು ವ್ಯಂಗ್ಯವಾಡಿದ ಕೆ.ಸಿ.ತ್ಯಾಗಿ , ಬೆಳೆಗಳು ಒಣಗಿರುವಾಗ ಮಳೆ ಬಂದರೇನು ಉಪಯೋಗ ಎಂದು ಕೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!