ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್-ಐಪಿಎಸ್-ಐಎಫ್ಎಸ್ ನಂತಹ ದೊಡ್ಡ ದೊಡ್ಡ ಹುದ್ದೆಗಳತ್ತ ಗುರಿಯಿಟ್ಟು ವ್ಯಾಸಂಗ ಮಾಡಬೇಕೆಂದು ಶ್ರೀಮತಿ ತಾಯಮ್ಮ ರಾಮೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿರುವ ಕೆ.ವಿ.ಶಂಕರೇಗೌಡ ಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಉತ್ತರ ವಲಯ ಆಯೋಜಿಸಿದ್ದ ಕೀಲಾರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಶಿಕ್ಷಕರು ಮತ್ತು ಪೋಷಕರು ಗುರುತಿಸುವ ಕಾರ್ಯದಲ್ಲಿ ಸಫಲತೆ ಕಾಣಬೇಕು. ಓದಿನೊಂದಿಗೆ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆಯುವ ಸಂಕಲ್ಪ ಕೈಗೊಂಡು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಆಸಕ್ತಿ ಹೆಚ್ಚಿಸಿ ಕೊಳ್ಳಬೇಕು ಎಂದು ಕಿವಿ ಮಾತೇಳಿದರು.
ನಮ್ಮ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ಮತ್ತು ಐಎಎಸ್-ಎಪಿಎಸ್-ಐಎಸ್ಎಫ್ ಆಕಾಂಕ್ಷಿತರ ತರಬೇತಿಗಾಗಿ ಎಲ್ಲಾ ನೆರವು ನೀಡಲಾಗುವುದು. ಆಸಕ್ತರು ಸಂಪರ್ಕಿಸಬೇಕೆಂದು ಕೋರಿದರು.
ಇದೇ ಸಂಧರ್ಭದಲ್ಲಿ ತಾಯಮ್ಮ ರಾಮೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಶಾಲೆಗಳಿಗೆ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಗಳನ್ನು ಶಿಕ್ಷಕರಿಗೆ ವಿತರಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಾನಾ ವೇಷಭೂಷಣ ಧರಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವಣಗೊಳಿಸಿದರು.
ಕಾರ್ಯಕ್ರಮದಲ್ಲಿ ಕೆ.ವಿ.ಶಂಕರೇಗೌಡ ಶಿಕ್ಷಣ ಸಂಸ್ಥೆ ಕೀಲಾರದ ಗೌರಾಧ್ಯಕ್ಷ ವೀರೇಶ್, ಗ್ರಾಪಂ.ಅಧ್ಯಕ್ಷೆ ಪುನೀತಾ, ಶಾಲೆಯ ಕಾರ್ಯದರ್ಶಿ ನವ್ಯಶ್ರೀ, ಉಪಾಧ್ಯಕ್ಷ ನಾಗೇಂದ್ರ, ಧರ್ಮದರ್ಶಿ ಗೌರಮ್ಮ,, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಶಿಧರ್ ಈಚಗೆರೆ, ಶಿಕ್ಷಕರಾದ ಮಂಜುಳಾ, ಶ್ರೀಧರ್, ಸುಜಾತಾ, ಉಮಾದೇವಿ ಮತ್ತು ಗ್ರಾಮದ ಮುಖಂಡರು ಮತ್ತಿತರರಿದ್ದರು.





