Friday, September 20, 2024

ಪ್ರಾಯೋಗಿಕ ಆವೃತ್ತಿ

ಚುನಾವಣೆಯ ನಂತರ ಬಿಜೆಪಿ ಮುಕ್ತ ದಕ್ಷಿಣ ಭಾರತ ನಿರ್ಮಾಣ : ಅಲ್ಕಾ ಲಂಬಾ

ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮುಕ್ತ ದಕ್ಷಿಣ ಭಾರತ ನಿರ್ಮಾಣವಾಗಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಐಸಿಸಿಸಿ)ಯ ವಕ್ತಾರೆ ಅಲ್ಕಾ ಲಂಬಾ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಗೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಂತೆ ಮಂಡ್ಯದಲ್ಲೂ ಅಪಾರವಾದ ಜನಸ್ಪಂದನೆ ದೊರೆತಿದೆ. ಆದ್ದರಿಂದ ಈ ಭಾರಿ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

150 ಸ್ಥಾನಗಳಲ್ಲಿ ಗೆಲುವು

ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಬಿಜೆಪಿ ಸರ್ಕಾರ ತೀವ್ರವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ರಾಜ್ಯ ಸರ್ಕಾರ ಮಿತಿ ಮೀರಿದ ಭಷ್ಟಾಚಾರ, 40 ಪರ್ಸೆಂಟ್ ಕಮಿಷನ್ನಿಂದಾಗಿ ಜನತೆ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಸೋಲುವ ಭೀತಿಯಿಂದ ಮೋದಿ, ಅಮಿತ್ ಶಾ ಹಾಗೂ ಯೋಗಿ ಅದಿತ್ಯರನ್ನು ಕರೆ ತಂದು ಪ್ರಚಾರ ನಡೆಸುತ್ತಿದೆ, ಆದರೆ ಬಿಜೆಪಿ ಯಾವುದೇ ತಂತ್ರ ಮಾಡಿದರೂ ಮಂಡ್ಯ ಜಿಲ್ಲೆಯ ಜನರು ಅದಕ್ಕೆ ಸೊಪ್ಪು ಹಾಕುವುದಿಲ್ಲ. ಇಲ್ಲಿನ ಜನತೆ ಜಾತ್ಯತೀತ ಮನೋಭಾವದವರಾಗಿದ್ದಾರೆ, ಇಂತಹ ಜನರ ಮನಸ್ಸಿನಲ್ಲಿ ಕೋಮುವಾದವನ್ನು ಭಿತ್ತಲು ಸಾಧ್ಯವಿಲ್ಲ ಎಂದರು.

ಲೂಟಿ ಹೊಡೆಯೋದು ಬಿಜೆಪಿಗೆ ಅಭ್ಯಾಸವಾಗಿ ಬಿಟ್ಟಿದೆ

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಇದುವರೆಗೆ 84 ಜನ ಅಪಘಾತಗಳಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ. ಅವರ ಪ್ರಾಣಕ್ಕೆ ಬೆಲೆ ಇಲ್ಲವೇ ? ಎಂದು ಕೆಪಿಸಿಸಿ ವಕ್ತಾರರಾದ ಭವ್ಯ ನರಸಿಂಹಮೂರ್ತಿ ಪ್ರಶ್ನಿಸಿದರು.

ಈ ಹೆದ್ದಾರಿಗೆ 8,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆಗಿದ್ದರೂ ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿಲ್ಲ ಏಕೆ ? ಇಂದಿಗೂ ಸರ್ವೀಸ್ ರಸ್ತೆ ಕಾಮಗಾರಿ ನಡೆಯುತ್ತಿದೆ, ಇದರಲ್ಲಿಯೂ 40 ಪರ್ಸೆಂಟ್ ಕಮಿಷನ್ ಹೊಡೆಯಲಾಗುತ್ತಿದೆಯೇ ? ಎಂದು ಪ್ರಶ್ನಿಸಿದರು.

ಹೆದ್ದಾರಿ ಉದ್ಘಾಟನೆಯ ನಂತರ ಟೋಲ್ ಮೂಲಕ ಜನರನ್ನು ಸುಲಿಗೆ ಮಾಡಲಾಗುತ್ತಿದೆ, ಇದರ ವಿರುದ್ಧ ಜನರು ಹೋರಾಟ ನಡೆಸಿ, ಪ್ರತಿಭಟಿಸಿದ್ದಾರೆ. ಲೂಟಿ ಹೊಡೆಯುವುದು ಬಿಜೆಪಿ ಪಕ್ಷಕ್ಕೆ ಅಭ್ಯಾಸವಾಗಿ ಬಿಟ್ಟಿದೆ ಎಂದು ಕಿಡಿಕಾರಿದರು.

 

ಸಾವಿನ ಕೂಪವಾದ ಬೆಂಗಳೂರು – ಮೈಸೂರು ಹೈವೇ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ರಾಜ್ಯದ ಜನರಿಗೆ ದುಃಸ್ವಪ್ನವಾಗಿದೆ, ಈ ಹೆದ್ದಾರಿಯನ್ನು  ಅವೈಜ್ಞಾನಿಕ ನಿರ್ಮಾಣ ಮಾಡಿರುವುದರಿಂದ ಸಾವಿನ ಕೂಪವಾಗಿ ಪರಿವರ್ತನೆಗೊಂಡಿದೆ ಎಂದು ಅಲ್ಕಾ ಲಂಬಾ ದೂರಿದರು.

ಹೆದ್ದಾರಿ ಉದ್ಘಾಟನೆಗೊಂಡ ದಿನದಿಂದ ಇಲ್ಲಿಯವರೆಗೆ 335 ಕ್ಕೂ ಹೆಚ್ಚು ಅಪಘಾತಗಳು ನಡೆದು 84 ಜನರು ಸಾವನ್ನಪ್ಪಿದ್ದಾರೆ. ಕುಂಬಳಗೋಡು ಮತ್ತು ನಿಡಗಟ್ಟ ನಡುವಿನ ಮಾರ್ಗವು 110 ಕ್ಕೂ ಹೆಚ್ಚು ಅಪಘಾತಗಳಿಗೆ ಸಾಕ್ಷಿಯಾಗಿ 41 ಜನರನ್ನು ಬಲಿ ಪಡೆದಿದೆ, 100 ಜನರು ಗಾಯಗೊಂಡಿದ್ದಾರೆ ಎಂದು ದೂರಿದರು.

ಮಂಡ್ಯ ಜಿಲ್ಲೆಯಾದ್ಯಂತ ಈ ಹೆದ್ದಾರಿಯಲ್ಲಿ 220 ಅಪಘಾತ ಪ್ರಕರಣಗಳು ನಡೆದಿವೆ, 43 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಪಘಾತಗಳಿಗೆ ಮುಖ್ಯ ಕಾರಣವೇ ಅಪೂರ್ಣವಾದ ಹೆದ್ದಾರಿ ಮತ್ತು ಅನಿಯಂತ್ರಿತ ವೇಗದಿಂದ ಓಡಾಡುವ ವಾಹನಗಳೇ ಆಗಿವೆ ಎಂದು ವಿವರಿಸಿದರು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಪೂರ್ಣಗೊಳಿಸದೇ ಟೋಲ್ ಸಂಗ್ರಹ ಮಾಡಲಾಗುತ್ತಿದೆ, ಸರ್ವಿಸ್ ರಸ್ತೆಗಳು ಇನ್ನೂ ನಿರ್ಮಾಣ ಹಂತದಲ್ಲಿವೆ, ಆದರೆ ಬಿಜೆಪಿ ನೇತೃತ್ವದ ಡಬಲ್ ಟ್ರಬಲ್ ಇಂಜಿನ್ ಸರಕಾರ ಪ್ರಯಾಣಿಕರಿಗೆ ಆತುರದ ಟೋಲ್ ವಿಧಿಸಿದೆ.  ಬಿಡದಿ ಬಳಿಯ ಫ್ಲೈಓವರ್‌ನಲ್ಲಿ ಹೆದ್ದಾರಿ, ರಸ್ತೆ ಹಾಳಾಗಿರುವುದು ಕಂಡುಬಂದಿದೆ, ಇದರಲ್ಲಿಯೂ 40 ಪರ್ಸೆಂಟ್ ಭ್ರಷ್ಟಾಚಾರ ನಡೆದಿರಬಹುದು ಎಂದು ಹೇಳಿದರು.

ಹೊಸದಾಗಿ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಳೆ ಬಿದ್ದಾಗ ಜಲಾವೃತವಾಯಿತು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಒಂದು ವಾರದೊಳಗೆ ಪ್ರವಾಹಕ್ಕೆ ಸಿಲುಕಿದೆ, ಹೆದ್ದಾರಿಯನ್ನು ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು, ಆದರೆ ಎಕ್ಸ್‌ಪ್ರೆಸ್‌ವೇ ಜಲಾವೃತವಾಯಿತು, ಇದಕ್ಕೆ ರಸ್ತೆ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರವೇ ಕಾರಣವಾಗಿದೆ ಎಂದರು.

ಕಾಂಗ್ರೆಸ್ ವಕ್ತಾರ ಎ.ಎನ್.ನಟರಾಜ್ ಗೌಡ ಮಾತನಾಡಿ, ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿದೇ ಸಂಚಾರಕ್ಕೆ ಮುಕ್ತ ಮಾಡಿರುವುದೇ ಎಲ್ಲಾ ಅಪಘಾತಗಳಿಗೆ ಕಾರಣವಾಗಿದೆ. ಚುನಾವಣೆಯ ಕಾರಣಕ್ಕಾಗಿ ತರಾತುರಿಯಲ್ಲಿ ಹೆದ್ದಾರಿಯನ್ನು ಮೋದಿಯವರು ಉದ್ಘಾಟನೆ ಮಾಡಿದರೂ ಆನಂತರ ದುಬಾರಿ ಟೋಲ್ ಸಂಗ್ರಹ ಮಾಡುವ ಮೂಲಕ ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಗೋಷ್ಠಿಯಲ್ಲಿ  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!