Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರವನ್ನು ಮೆಚ್ಚಿಸಲು ಪೋಲಿಸ್ ಇಲಾಖೆಯ ಸ್ಥೈರ್ಯ ಕುಂದಿಸಿದ್ರಾ ಎಡಿಜಿಪಿ ಅಲೋಕ್ ಕುಮಾರ್..!

ಯಾವುದೇ ಆರೋಪಿಯನ್ನು ಹಿಡಿಯಲು ಪೋಲಿಸ್ ಇಲಾಖೆ ವೈಜ್ಞಾನಿಕವಾಗಿ, ಕಾನೂನಿನ ದೃಷ್ಟಿಕೋನದಿಂದ ತನಿಖೆ ಮಾಡಬೇಕಾಗುತ್ತದೆ. ಅಂದರೆ ಆರೋಪಿಗಳ ಚಲನವಲನ, ವೈಜ್ಞಾನಿಕ ಮಾಹಿತಿ ಕಲೆ  ಹಾಕುವುದು, ಸಂಬಂಧಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರ ವಿಚಾರಣೆ, ಇವೆಲ್ಲವೂ ಒಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಅನುಸರಿಸಬೇಕಾದ ಕಾನೂನು ಪ್ರಕ್ರಿಯೆ. ಇದೆಲ್ಲವನ್ನೂ ಪೋಲಿಸರು ಸ್ಯಾಂಟ್ರೋ ರವಿ ಕೇಸಿನಲ್ಲಿ ಮಾಡಿಯೇ ತನಿಖೆ ಮೂಲಕ ಆತನನ್ನು ಬಂಧಿಸಿದ್ದಾರೆ.

ಆದರೆ ಎಡಿಜಿಪಿ (Additional Director General of Police) ಅಲೋಕ್ ಕುಮಾರ್ ಸ್ಯಾಂಟ್ರೋ ರವಿ ಹಿಡಿಯಲು ನಾನು ನಿಮಿಷಾಂಬ ದೇವಿಗೆ ಹರಕೆ ಹೊತ್ತಿದ್ದೆ‌. ಅದಾಗಿ ನಾಲ್ಕು ದಿನಗಳ ನಂತರ ಆತನನ್ನು ನಮ್ಮ ಇಲಾಖೆ ಬಂಧಿಸಿದೆ‌. ಈ ಹಿನ್ನೆಲೆಯಲ್ಲಿ ನಾನು, ಹರಕೆ ತೀರಿಸುತ್ತಿರುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದರು.

ಅಲೋಕ್ ಕುಮಾರ್ ಅವರಿಗೆ ಅವರ ಇಷ್ಟ ದೇವರ ಬಗ್ಗೆ ನಂಬಿಕೆ ಇರುವುದು, ಭಕ್ತಿಯಿಂದ ಪೂಜೆ ಮಾಡುವುದು ಅವರ ಧಾರ್ಮಿಕ ಹಕ್ಕು. ಅದನ್ನು ಯಾರೂ ಕೂಡ ಪ್ರಶ್ನೆ ಮಾಡುವುದಿಲ್ಲ‌. ಆದರೆ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಈ ರೀತಿ ಬಹಿರಂಗವಾಗಿ ಹರಕೆ ಹೊತ್ತಿದ್ದೆ ಎನ್ನುವುದು ಪೋಲಿಸ್ ಇಲಾಖೆಯ ಇತರ ಪೋಲಿಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಅಲ್ಲವೇ ?

ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ರೌಡಿಗಳನ್ನು ಮಟ್ಟ ಹಾಕಲು ಅಲೋಕ್ ಕುಮಾರ್ ಅವರೇ ಸರಿ ಎಂದು ನಿರ್ಧಾರಕ್ಕೆ ಬಂದು ಅವರನ್ನು ಬೆಂಗಳೂರು ಕಮೀಷನರ್ ಆಗಿ ನೇಮಕ ಮಾಡಿದ್ದರು‌. ಆಗ ಅಲೋಕ್ ಕುಮಾರ್ ಅವರು ರೌಡಿಗಳನ್ನು ಮಟ್ಟ ಹಾಕಿ ಕುಮಾರಸ್ವಾಮಿ ಅವರ ಮೆಚ್ಚುಗೆ ಪಡೆದಿದ್ದರು.

ಈಗ ದೇವರು, ಪೂಜೆ, ಹರಕೆ ಎಂದರೆ ಸರ್ಕಾರಕ್ಕೆ ಹತ್ತಿರವಾಗಬಹುದು ಎಂಬ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೀಗೆ ಹರಕೆ ಹೊತ್ತಿದ್ದೆ, ಅದರಂತೆ ಆರೋಪಿ ಸ್ಯಾಂಟ್ರೋ ರವಿ ಬಂಧನವಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಸಂವಿಧಾನ, ಕಾನೂನು ಎಲ್ಲವನ್ನೂ ಮೀರಿ, ಹರಕೆಯನ್ನು ಹೈಲೈಟ್ ಮಾಡುವ ಮೂಲಕ ಆಡಳಿತಗಾರರನ್ನು ಮೆಚ್ಚಿಸುವ ಕೆಲಸ ಮಾಡಿದ್ರಾ ಎಂದು ರಾಜ್ಯದ ಜನರು  ಮಾತನಾಡಿಕೊಳ್ಳು ವಂತಾಗಿದೆ.

ಯಾವುದೇ ಒಂದು ಸರ್ಕಾರದ ಅಧೀನದಲ್ಲಿ ಬರುವ ಅಧಿಕಾರಿಗಳಾಲಿ, ನೌಕರರಾಗಲಿ ಕರ್ತವ್ಯದಲ್ಲಿರುವಾಗ ಬಹಿರಂಗವಾಗಿ ಯಾವುದೇ ಒಂದು ಧರ್ಮದ ಪರವಾಗಿ ಧಾರ್ಮಿಕ ಆಚರಣೆಯನ್ನು ಮಾಡುವಂತಿಲ್ಲ ಎಂದು ಸರ್ಕಾರವೇ ಬಿಡುಗಡೆ ಮಾಡಿರುವ ನಿಯಮಾವಳಿಗಳೆ ಸ್ಪಷ್ಟಪಡಿಸುತ್ತವೆ, ಅಲ್ಲದೇ ಸರ್ಕಾರಿ ಅಧಿಕಾರಿಗಳೆಂದರೆ ಕೇವಲ ಒಂದು ಧರ್ಮದ ಸೇವಕರಲ್ಲ ಅಲ್ಲವೇ ? ಅವರು ಎಲ್ಲಾ ಧರ್ಮಗಳನ್ನು ಸರಿಸಮವಾಗಿ ಪರಿಗಣಿಸಬೇಕಾಗುತ್ತದೆ. ಆದರೆ ವೈಯಕ್ತಿಕ ಬದುಕಿನಲ್ಲಿ ತಮ್ಮ ಇಷ್ಟದ ಧಾರ್ಮಿಕ ಆಚರಣೆಯನ್ನು ಮಾಡಲು ಯಾವುದೆ ಅಡ್ಡಿ ಇಲ್ಲವಾದರೂ, ಸರ್ಕಾರಿ ಸೇವೆಯಲ್ಲಿದ್ದೂ ಅದೂ ಪೊಲೀಸ್ ಇಲಾಖೆಯ ಎಡಿಜಿಪಿಯಾಗಿ ಒಂದು ಧರ್ಮದ ಪರವಾಗಿ ಪರೋಕ್ಷವಾಗಿ ಪ್ರಚಾರ ಮಾಡುವುದು ಪೊಲೀಸ್ ಇಲಾಖೆಯ ನಿಯಮಾವಳಿಗಳಿಗೆ ಸೂಕ್ತ ಎನಿಸುತ್ತವೆಯೇ ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಾಗಿದೆ.

ಅಲೋಕ್ ಕುಮಾರ್ ಅವರು ನಿಜವಾಗಿಯೂ ನಿಮಿಷಾಂಭ ದೇವಿ ಮೆಚ್ಚುವಂತೆ ಮಾಡಬೇಕಾದ ಕೆಲಸವೊಂದಿದೆ. ಅದು ಸ್ಯಾಂಟ್ರೋ ರವಿ ಯಾವ ಯಾವ ಮಂತ್ರಿಗಳೊಂದಿಗೆ, ಪೋಲಿಸ್ ಇಲಾಖೆ ಅಧಿಕಾರಿಗಳೊಂದಿಗೆ ಸೇರಿ ವರ್ಗಾವಣೆ ದಂಧೆ ಸೇರಿದಂತೆ ಅನೈತಿಕ ದಂಧೆ ನಡೆಸಿದ್ದಾನೆ ಎಂಬುದನ್ನು ಪತ್ತೆ ಹಚ್ಚಿ ಜನರ ಮುಂದಿಡಬೇಕಿದೆ.

ಪೋಲಿಸ್ ಅಧಿಕಾರಿಗಳನ್ನು ಬಳಸಿಕೊಂಡ ಸ್ಯಾಂಟ್ರೋ ರವಿಯು ಮೋಸದಿಂದ ಮದುವೆಯಾದ ಹೆಣ್ಣು ಮಗಳು ಹಾಗೂ ಆಕೆಯ ತಂಗಿಯ ಮೇಲೆ ಕೇಸು ಹಾಕಿ ಜೈಲಿಗೆ ಕಳಿಸಿದ್ದ ಬಗ್ಗೆ ತನಿಖೆ ನಡೆಸಬೇಕಾಗಿದೆ. ಅಲ್ಲದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದ ಸರ್ಕಾರದ ಉನ್ನತ ಅಧಿಕಾರಿ ಯಾರೆಂಬುದನ್ನು ಬಯಲಿಗೆ ಎಳೆಯುವುದು ದೇವರು ಮೆಚ್ಚುವಂತ ಕೆಲಸ, ಎಡಿಜಿಪಿ ಅಲೋಕ್ ಕುಮಾರ್ ಮೊದಲು ಅಂತಹ ಕೆಲಸವನ್ನು  ಮಾಡಲಿ ಎಂಬುದು ರಾಜ್ಯದ ಜನತೆ ಮನವಿಯಾಗಿದೆ. ಅವರು ಯಾರನ್ನೋ ಮೆಚ್ಚಿಸಲು, ಪೋಲಿಸ್ ಇಲಾಖೆಯಲ್ಲಿರುವ ಇತರ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದಲ್ಲವೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!