Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಮರಾವತಿ ನಿವೇಶನ ಹಂಚಿಕೆ ವಿವಾದ : ಎಸ್ಪಿ ಯತೀಶ್ ಮಧ್ಯ ಪ್ರವೇಶ

ಮಂಡ್ಯ ಜಿಲ್ಲಾ ಪೊಲೀಸ್‌ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘದ ಸದಸ್ಯರಿಗೆ ಅಮರಾವತಿ ಡೆವಲಪರ್ಸ್ ನೀಡಬೇಕಿದ್ದ ನಿವೇಶನ ಪ್ರಕರಣ ವಿವಾದವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಧ್ಯ ಪ್ರವೇಶ ಮಾಡಿದ್ದಾರೆ.

ಸೋಮವಾರ ಜಿಲ್ಲಾ ಪೊಲೀಸ್‌ ಭವನದಲ್ಲಿ ಎಸ್ಪಿ ಯತೀಶ್ ಸಮ್ಮುಖದಲ್ಲಿ ಅಮರಾವತಿ ಡೆವಲಪರ್ಸ್ ಮಾಲೀಕ ಅಮರಾವತಿ ಚಂದ್ರಶೇಖರ್ ಹಾಗೂ ಪೊಲೀಸ್ ಗೃಹ ನಿರ್ಮಾಣ ಸಂಘದ ಸದಸ್ಯರು ಸಭೆ ನಡೆಸಿದರು. ಎಸ್ಪಿ ಎನ್.ಯತೀಶ್ ಅವರು ಜಿಲ್ಲಾ ಪೊಲೀಸ್‌ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರು ಹಾಗೂ ಉದ್ಯಮಿ ಅಮರಾವತಿ ಚಂದ್ರಶೇಖರ್‌ರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಂಡ್ಯ ನಗರದ ಹೊರವಲಯದಲ್ಲಿ ಪೊಲೀಸರ ಗೃಹ ನಿರ್ಮಾಣಕ್ಕೆ ನೀಡಬೇಕಿರುವ 27 ಎಕರೆ ಜಾಗದಲ್ಲಿ 18 ಎಕರೆ ಜಾಗಕ್ಕೆ ದಾಖಲಾತಿ ಇನ್ನೂ ಹಸ್ತಾಂತರಿಸಿಲ್ಲ, ಉಳಿದ 9 ಎಕರೆ ಇನ್ನೂ ಅಭಿವೃದ್ಧಿ ಪಡಿಸಿಲ್ಲ. ನಿವೇಶನ ನೀಡುವುದಾಗಿ ಹೇಳಿ ಈಗಾಗಲೇ 13 ವರ್ಷಗಳು ಕಳೆದಿವೆ. ಆದರೂ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ. ಈಗಾಗಲೇ 18 ಕೋಟಿ ಹಣ ನೀಡಲಾಗಿದೆ. ಸದಸ್ಯರೆಲ್ಲ ಸಾಲ ಮಾಡಿ ಹಣ ಕಟ್ಟಿದ್ದಾರೆ. ಸಂಘದ ಸದಸ್ಯರಲ್ಲಿ 150 ಮಂದಿ ನಿವೃತ್ತರಾಗಿದ್ದು, ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರತಿ ಚದರಡಿಗೆ 350 ರೂ.ನಂತೆ ಗುತ್ತಲು ಹಾಗೂ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್‌ನಲ್ಲಿ 27 ಎಕರೆ ಜಮೀನಿನಲ್ಲಿ ನಿವೇಶನ ಅಭಿವೃದ್ಧಿಪಡಿಸಿ 2021 ನ.30ರಂದು ಹಸ್ತಾಂತರ ಮಾಡಲು ಒಪ್ಪಂದವಾಗಿತ್ತು. ಆದರೆ, ಹಲವು ಕಾರಣ ಕೊಟ್ಟು ಹಲವು ಬಾರಿ ಹಸ್ತಾಂತರ ಮುಂದೂಡಲಾಗಿದೆ ಎಂದು ನಿವೇಶನ ಆಕಾಂಕ್ಷಿತರು ದೂರಿದರು.

ಅಲ್ಲದೆ 27 ಎಕರೆ ಜಮೀನಿನ ಲೇಔಟ್ ಪ್ಲಾನ್ ತಯಾರಾಗಿಲ್ಲ. ಸರ್ಕಾರಿ ಕಚೇರಿಯಲ್ಲಿ ಸಂಘಕ್ಕೆ ಹಸ್ತಾಂತರ ಮಾಡಲು ದಾಖಲೆ ನೀಡಿಲ್ಲ. ಲಭ್ಯವಿರುವ ಜಮೀನನ್ನು ನಮ್ಮ ಸಂಘ ಹಾಗೂ ಪ್ರೌಢಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಒಂದೇ ಪ್ಲಾನ್ ನೀಡಿರುವುದರಿಂದ ಗೊಂದಲವಾಗುತ್ತಿದೆ. ಲೇಔಟ್ ರಚನೆಗೆ ಅನುಗುಣವಾಗಿ ದಾಖಲೆ ಲಭ್ಯವಿಲ್ಲ. ಆದ್ದರಿಂದ ತ್ವರಿತವಾಗಿ ಸಮಸ್ಯೆ ಬಗೆಹರಿಸುವಂತೆ ಎಸ್ಪಿ ಯತೀಶ್ ಅವರಿಗೆ ಪೊಲೀಸ್ ಗೃಹ ನಿರ್ಮಾಣ ಸಂಘದ ಸದಸ್ಯರು ಮನವಿ ಮಾಡಿದರು.

ಪೊಲೀಸ್ ಇಲಾಖೆ ನೌಕರರ ಮಾತು ಕೇಳಿಸಿಕೊಂಡ ಎಸ್ಪಿ ಯತೀಶ್ ಅವರು, ಅಮರಾವತಿ ಚಂದ್ರಶೇಖರ್ ಅವರಿಗೆ ಇನ್ನು ಒಂದೆರಡು ದಿನಗಳಲ್ಲಿ ಯಾವುದೇ ಸಬೂಬು ಹೇಳದೆ ಸಮಸ್ಯೆ ಬಗೆಹರಿಸಬೇಕೆಂದು ಸೂಚಿಸಿದರು‌. ಇದಕ್ಕೆ ಅಮರಾವತಿ ಚಂದ್ರಶೇಖರ್ ಫೆ.2ರೊಳಗೆ ನಿವೇಶನ ಹಸ್ತಾಂತರ ಸಂಬಂಧ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಜಿಲ್ಲಾ ಪೋಲಿಸ್ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘದ ಸದಸ್ಯರಾದ ನಾವೆಲ್ಲ ಅಂತಿಮವಾಗಿ ಎಸ್ಪಿ ಯತೀಶ್ ಅವರ ಮೊರೆ ಹೋಗಿದ್ದು ,ಅವರೇ ಅಮರಾವತಿ ಚಂದ್ರಶೇಖರ್ ಗೆ ಖಡಕ್ಕಾಗಿ ಸೂಚಿಸಿ ನಿವೇಶನ ಕೊಡಿಸಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!