Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರತಿ ಮನೆ-ಮನೆಯಲ್ಲೂ ಅಂಬೇಡ್ಕರ್ ವಿಚಾರವಾದಿಗಳು ಹುಟ್ಟಬೇಕು: ಸತೀಶ್ ಜಾರಕಿಹೊಳಿ

ಇತಿಹಾಸವನ್ನು ತಿಳಿಯಬೇಕು, ಇತಿಹಾಸ ತಿಳಿಯದೇ ಏನನ್ನೂ ಮಾಡಲಾಗದು, ಅಂಬೇಡ್ಕರ್ ಅವರಂತಹ ಮಹಾನ್ ನಾಯಕರ ಇತಿಹಾಸವನ್ನು ತಿಳಿದು ಮೈಗೂಡಿಸಿಕೊಳ್ಳುವುದೇ ನಮ್ಮ ಸಾಧನೆಯಾಗಬೇಕು, ಪ್ರತಿ ಗ್ರಾಮ ಮನೆ ಮನೆಯಲ್ಲೂ ಅಂಬೇಡ್ಕರ್ ವಿಚಾರವಾದಿಗಳು ಹುಟ್ಟಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಆಶಿಸಿದರು.

ಮಂಡ್ಯ ತಾಲೂಕಿನ ಕಾಗೆಮಂಟಿಯ ಬೋರೇಗುಡ್ಡದಲ್ಲಿರುವ ಚಾರ್ವಾಕ ವೈಚಾರಿಕ ಮಹಾ ಮನೆಯಲ್ಲಿ ಚಾರ್ವಾಕ ವೈಚಾರಿಕ ಮಹಾ ಮನೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ದಮನಿತರ ಬಂಗಾರದ ದಿನ’ ಮತ್ತು ಅಭಿನಂದನೆ-ನಾಟಕ ಪ್ರದರ್ಶನ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ತಳಹದಿಯಾಗಿದೆ. ಈ ಸಂದರ್ಭದಲ್ಲಿ ಎಲ್ಲರ ಸಹಕಾರ ಪಡೆದು ಅದನ್ನು ಸಂವಿಧಾನವನ್ನು ಕಾರ‍್ಯರೂಪಕ್ಕೆ ತರಬೇಕು. ಅಂತಹ ಸಹಕಾರ ಸಿಗುವುದಿಲ್ಲವೋ ಅಲ್ಲಿಯವರೆವಿಗೂ ನಮ್ಮ ಹೋರಾಟ ಯಶಸ್ವಿಯಾಗುವುದಿಲ್ಲ. ಸೌಲಭ್ಯಕ್ಕಾಗಿಯೇ ನಿರಂತರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಬುದ್ದ ಕೂಡ ಸಂಘರ್ಷದಿಂದ ದೇಶವನ್ನು ಬಿಟ್ಟು ಹೋದವರು. ಎಲ್ಲರಿಗೂ ಹಕ್ಕು ಸಿಗುವಂತಾಗಬೇಕು ಎಂಬ ಕಾರಣಕ್ಕೆ ಮೊದಲ ಬಾರಿಗೆ ಹೋರಾಟವನ್ನು ಮಾಡಿದವರು. ಆದರೆ ಅವರು ದೇಶವನ್ನು ತೊರೆಯಬೇಕಾಯಿತು. ಅದೇ ರೀತಿ ಬಸವಣ್ಣ ಕೂಡ ಅಂತರ್‌ಜಾತಿ ವಿವಾಹ ಮಾಡಲು ಮುಂದಾದರು. ಅದರಿಂದ ಅವರು ಸ್ಥಾನ ಕಳೆದುಕೊಳ್ಳಬೇಕಾಯಿತು. ಸಮ ಸಮಾಜ ನಿರ್ಮಾಣಕ್ಕೆ ಮುಂದಾದ ಅಂಬೇಡ್ಕರ್ ಸಹ ಎನೆಲ್ಲಾ ಅನುಭವಿಸಿದರು ಎಂಬುದನ್ನು ನೋಡಿದ್ದೇವೆ ಎಂದು ವಿವರಿಸಿದರು.

ಚಾರ್ವಾಕ ವೈಚಾರಿಕ ಮಹಾಮನೆ ಸಂಸ್ಥೆಯ ಅಭಿವೃದ್ಧಿಗೆ ಸಮಾಜಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದೇವೆ, ವೈಯಕ್ತಿಕವಾಗಿ ನಮ್ಮ ಸಹಕಾರ ಇರುತ್ತದೆ. ಜೊತೆಗೆ ಸ್ಥಳೀಯ ಶಾಸಕರು ಸಹ ಇದ್ದಾರೆ. ಅಲ್ಲದೆ ಸರ್ಕಾರದ ವತಿಯಿಂದ ಅಗತ್ಯವಾಗಿರುವ ಸೌಲಭ್ಯಗಳನ್ನು ಖಂಡಿತವಾಗಿ ಕೊಡಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

₹10 ಲಕ್ಷ ರೂ. ಅನುದಾನ

ಶಾಸಕ ಪಿ. ರವಿಕುಮಾರ್ ಮಾತನಾಡಿ ಮಂಡ್ಯ ತಾಲೂಕಿನಲ್ಲಿರುವ ಈ ಸಂಸ್ಥೆ ಕೈಗೊಂಡಿರುವ ಸೇವಾ ಕಾರ‍್ಯಗಳಿಗೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ “ಮನುಸ್ಮತಿ-ಭಾರತ ಸಂವಿಧಾನ” ನಾಟಕ ಪ್ರದರ್ಶನ ನಡೆಯಿತು. ಅವರೆಕಾಳು-ಮುದ್ದೆ-ಪಾಯಸ, ಅನ್ನ ನುಗ್ಗೆಕಾಯಿ ಸಾಂಬಾರಿನ ಸಾಮೂಹಿಕ ಬೋಜನ ಸೇವೆ ನಡೆಯಿತು. ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಚಾರ್ವಾಕ ಸಂಸ್ಥೆಯ ನಿರ್ದೇಶಕ ಮಾಚಹಳ್ಳಿ ಗಿರೀಶ್, ಮಾಚಹಳ್ಳಿ ಪರಮೇಶ್, ನಿವೃತ್ತ ಇಂಜಿನಿಯರ್ ಚಂದ್ರಹಾಸ, ರಾಮಚಂದ್ರಪ್ಪ, ಬೌದ್ಧ ಬಿಕ್ಕು ಮನೋರಕ್ಕಿತ ಬಂತೇಜಿ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಡ ಅಧ್ಯಕ್ಷ ನಹೀಂ, ಮುಖಂಡರಾದ ದೇವರಾಜ್ ಕೊಪ್ಪ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!