Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ರಸ್ತೆಗೆ ಪರ್ಯಾಯ ಹೆಸರು ನಾಮಕರಣಕ್ಕೆ ವಿರೋಧ : ಜಿಲ್ಲಾಡಳಿತಕ್ಕೆ ಮನವಿ

ಮಂಡ್ಯ ನಗರದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಗೆ ( ನೂರಡಿ ರಸ್ತೆ ) ಪರ್ಯಾಯ ಹೆಸರು ನಾಮಕರಣ ಮಾಡಲು ನಿರ್ಣಯ ಕೈಗೊಂಡಿರುವ ನಗರಸಭೆಯ ದಲಿತ ವಿರೋಧಿ ನೀತಿ ವಿರುದ್ಧ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ನಗರಸಭೆ ಮಾಡಿರುವ ನಿರ್ಣಯವನ್ನು ರದ್ದುಪಡಿಸಲು ಒತ್ತಾಯಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅವರಿಗೆ ಅಂಬೇಡ್ಕರ್ ಭವನದಲ್ಲಿ ಮನವಿ ಸಲ್ಲಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ಬುದ್ಧಯಾನ, ಶ್ರೀಹುಚ್ಚಮ್ಮ ದೇವಾಲಯ ಸಮಿತಿ, ವಿಶ್ವ ಜ್ಞಾನಿ ಸೇವಾ ಟ್ರಸ್ಟ್, ಪರಿಶಿಷ್ಟ ಜಾತಿ- ಪಂಗಡದ ನಿವೃತ್ತ ನೌಕರರ ಸಂಘ, ಶ್ರೀಬಿಸಿಲು ಮಾರಮ್ಮ ಸೇವಾ ಟ್ರಸ್ಟ್, ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ಅಭಿವೃದ್ಧಿ ಸಂಘ, ಬಹುಜನ ಸಮಾಜ ಪಕ್ಷ, ಧಮ್ಮ ಧ್ಯಾನ ಕೇಂದ್ರ ಸೇರಿದಂತೆ ವಿವಿಧ ಸಂಘಟನೆಗಳು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಹೆಸರನ್ನು ಬದಲಾವಣೆ ಮಾಡಲು ಮುಂದಾಗಿರುವ ನಗರಸಭೆಯ ವಿರುದ್ಧ ಕಿಡಿಕಾರಿದ್ದಾರೆ.

ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಯು ನೂರು ಅಡಿ ಅಗಲ ಇದ್ದು ಹಾಗಾಗಿ ನೂರಡಿ ರಸ್ತೆ ಎಂದು ಸಾರ್ವಜನಿಕ ವಲಯದಲ್ಲಿ ಬಿಂಬಿತಗೊಂಡಿದೆ. ಇದಕ್ಕೆ ನಗರಸಭೆ ಅಂಬೇಡ್ಕರ್ ರಸ್ತೆಯ ನಾಮಫಲಕ ಹಾಕದಿರುವುದು ಪ್ರಮುಖ ಕಾರಣವಾಗಿದೆ. ಇದನ್ನು ನೆಪ ಮಾಡಿಕೊಂಡು ಈಗಾಗಲೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಹೆಸರನ್ನು ನಾಮಕರಣ ಮಾಡಲಾಗಿರುವ ರಸ್ತೆಗೆ ಈ ರೀತಿ ಬೇರೊಂದು ಹೆಸರನ್ನು ನಾಮಕರಣ ಮಾಡಲು ಮುಂದಾಗಿರುವುದು ಸಂವಿಧಾನ ಬಾಹಿರ ನಡೆಯಾಗಿದ್ದು, ಸಾಮಾಜಿಕ ಸಮಾನತೆಗೆ ಹೋರಾಡಿದ ಮಹಾ ನಾಯಕ, ವಿಶ್ವಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ಮಾಡಿದ ಅಪಮಾನವಾಗಿದೆ ಎಂದು ಆರೋಪಿಸಿದ್ದಾರೆ.

1980 ರಲ್ಲಿ ರಸ್ತೆಗೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡುವ ವಿಷಯ ಪ್ರಸ್ತಾಪವಾಗಿ ಸಾರ್ವಜನಿಕ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿತ್ತು, ಅಂಬೇಡ್ಕರ್ ವೃತ್ತದಿಂದ ಬೆಸಗರಹಳ್ಳಿ ರಾಮಣ್ಣ ವೃತದ ವರೆಗೆ ಅಂಬೇಡ್ಕರ್ ರವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಿ ಅಂದಿನ ಜಿಲ್ಲಾಧಿಕಾರಿ ಬಿ. ಬಸವಯ್ಯನವರು 1980ನೇ ನವೆಂಬರ್ ಮಾಸದಲ್ಲಿ ವಾಟರ್ ಟ್ಯಾಂಕ್ ವೃತ್ತದ ಬಳಿ ದಲಿತ ಸಮುದಾಯದ ಜನರ ಸಮ್ಮುಖದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಎಂದು ಘೋಷಿಸಿದ್ದರು ಅನಂತರದ ದಿನಗಳಲ್ಲಿ ನಗರ ಸಭೆ ನಿರ್ಣಯ ಮಾಡಿದೆ.

ಈಗಲೂ ಸಹ ರಸ್ತೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟು, ಕಟ್ಟಡಗಳಲ್ಲಿ ಮತ್ತು ಸಂಘ- ಸಂಸ್ಥೆ. ವಕೀಲರು ಅಷ್ಟೇ ಅಲ್ಲದೆ ಪತ್ರಿಕಾ ಕಚೇರಿ ವಿಳಾಸಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಮೂದಿಸಿದೆ. ನಗರಸಭೆ ನೀಡಲಾಗಿರುವ ಪರವಾನಿಗೆಯಲ್ಲಿಯೂ ಅಂಬೇಡ್ಕರ್ ರಸ್ತೆ ಎಂದು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮೂಲ ಹೆಸರಾದ ಅಂಬೇಡ್ಕರ್ ರಸ್ತೆ ಎಂದು ನಮೂದಿಸಿ ಅಂಗಡಿಗಳ ಪರವಾನಿಗೆಯನ್ನು ನವೀಕರಿಸಬೇಕು ಎಂದು ನಿರ್ಣಯ ಮಾಡಲಾಗಿದೆ, ಅದೇ ರೀತಿ ಅಂಬೇಡ್ಕರ್ ರಸ್ತೆ ಮತ್ತು ವೃತ್ತ ಇರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಲು ನಗರಸಭೆ ನಿರ್ಣಯಿಸಿದೆ. ಒಂದು ವೇಳೆ ರಸ್ತೆಗೆ ಯಾವುದೇ ಹೆಸರು ನಾಮಕರಣ ಮಾಡಿರದಿದ್ದರೆ, ಆ ರಸ್ತೆಗೆ ಯಾವ ಹೆಸರು ಪ್ರಚಲಿತವಾಗಿರುತ್ತದೊ ಅದೇ ಹೆಸರನ್ನ ನಾಮಕರಣ ಮಾಡಬೇಕೆಂಬ ನಿಯಮಾವಳಿ ಕರ್ನಾಟಕ ಪೌರಸಭೆಗಳ ಅಧಿನಿಯಮದಲ್ಲಿದೆ ಎಂದು ಹೇಳಿದ್ದಾರೆ.

ನಗರಸಭೆಯ ನಿರ್ಣಯಕ್ಕೆ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು. ಪರ್ಯಾಯ ಹೆಸರು ನಾಮಕರಣ ಮಾಡುವ ನಿರ್ಣಯವನ್ನು ಹಿಂಪಡೆಯಬೇಕು ಎಂದು ನಗರಸಭೆಯನ್ನು ಒತ್ತಾಯಿಸಿವೆ. ನಗರಸಭೆ ಪರ್ಯಾಯ ಹೆಸರು ನಾಮಕರಣ ಮಾಡಲು ಮಾಡಿರುವ ನಿರ್ಣಯವನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಡಾ, ಬಿ.ಆರ್ ಅಂಬೇಡ್ಕರ್ ರವರ ಹೆಸರಿನ ನಾಮ ಫಲಕವನ್ನು ಅಳವಡಿಸುವಂತೆ ಒತ್ತಾಯಿಸಿದ್ದಾರೆ

ದಲಿತ ಸಮುದಾಯದ ಮುಖಂಡರಾದ ವೆಂಕಟಗಿರಿಯಯ್ಯ, ಗುರುಮೂರ್ತಿ, ಎಂ ಪಿ ಶಿವರಾಮಮೂರ್ತಿ, ಎಂ ಬಿ ಶಿವಶಂಕರ್, ಲೋಕೇಶ್, ಎಂ ಎಸ್ ಮೂರ್ತಿ, ಎಂ ಎಲ್ ತುಳಸೀಧರ್, ಬಿ ಪಿ ಪ್ರಕಾಶ್, ವಕೀಲರಾದ ಜೆ.ರಾಮಯ್ಯ, ಮಹೇಶ್ ಕೃಷ್ಣ, ಲಕ್ಷ್ಮಣ್ ಚೀರನಹಳ್ಳಿ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!