Tuesday, November 24, 2026

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ರಸ್ತೆಗೆ ಪರ್ಯಾಯ ಹೆಸರು : ನಿರ್ಣಯ ಹಿಂಪಡೆಯಲು ನಾಗರಿಕರ ಒತ್ತಾಯ

ಮಂಡ್ಯ ನಗರದ ಡಾ. ಬಿ.ಆರ್.ಅಂಬೇಡ್ಕರ್ ರಸ್ತೆಗೆ (ನೂರಡಿ ರಸ್ತೆ ) ಪರ್ಯಾಯ ಹೆಸರು ನಾಮಕರಣ ಮಾಡುವ ನಗರಸಭೆ ನಿರ್ಣಯಕ್ಕೆ ಆಕ್ಷೇಪ ಸಲ್ಲಿಸಿರುವ ವಿವಿಧ ವಾರ್ಡಿನ ನಾಗರಿಕರು ನಿರ್ಣಯ  ಹಿಂಪಡೆಯು ವಂತೆ ಒತ್ತಾಯಿಸಿದರು.

ಮಂಡ್ಯ ನಗರಸಭೆಗೆ ತೆರಳಿದ ವಿವಿಧ ವಾರ್ಡಿನ ನೂರಾರು ನಾಗರಿಕರು ಬಿ.ಆರ್. ಅಂಬೇಡ್ಕರ್ ರಸ್ತೆ ಎಂಬುದನ್ನು ಬದಲಾವಣೆ ಮಾಡಬಾರದು,ಕೂಡಲೇ ಅಂಬೇಡ್ಕರ್ ನಾಮ ಫಲಕ ಅಳವಡಿಸುವಂತೆ ಕೋರಿದರು.

ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯು ನೂರು ಅಡಿ ಅಗಲ ಇದ್ದರಿಂದ, ನೂರಡಿ ರಸ್ತೆ ಎಂದು ಸಾರ್ವಜನಿಕ ವಲಯದಲ್ಲಿ ಬಿಂಬಿತಗೊಂಡಿದೆ. ಇದಕ್ಕೆ ನಗರಸಭೆ ಅಂಬೇಡ್ಕರ್ ರಸ್ತೆ ಎಂದು ನಾಮಫಲಕ ಹಾಕದಿರುವುದೇ ಪ್ರಮುಖ ಕಾರಣವಾಗಿದೆ. ಇದನ್ನು ನೆಪ ಮಾಡಿಕೊಂಡು ಈಗಾಗಲೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಲಾಗಿರುವ ರಸ್ತೆಗೆ ಈ ರೀತಿ ಬೇರೊಂದು ಹೆಸರನ್ನು ನಾಮಕರಣ ಮಾಡಲು ಮುಂದಾಗಿರುವುದು ಸಂವಿಧಾನ ಬಾಹಿರ ನಡೆಯಾಗಿದ್ದು, ಸಾಮಾಜಿಕ ಸಮಾನತೆಗೆ ಹೋರಾಡಿದ ಮಹಾ ನಾಯಕ, ವಿಶ್ವಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ಮಾಡಿದ ಅಪಮಾನ ವಾಗಿದೆ ಎಂದು ಆರೋಪಿಸಿದರು.

1980ರಲ್ಲಿ ರಸ್ತೆಗೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡುವ ವಿಷಯ ಪ್ರಸ್ತಾಪವಾಗಿ ಸಾರ್ವಜನಿಕ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿತ್ತು‌. ಅಂಬೇಡ್ಕರ್ ವೃತ್ತದಿಂದ ಬೆಸಗರಹಳ್ಳಿ ರಾಮಣ್ಣ ವೃತದವರೆಗೆ ಅಂಬೇಡ್ಕರ್ ರವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಿ ಅಂದಿನ ಜಿಲ್ಲಾಧಿಕಾರಿ ಬಿ. ಬಸವಯ್ಯರವರು 1980 ನೇ ನವೆಂಬರ್ ಮಾಸದಲ್ಲಿ ವಾಟರ್ ಟ್ಯಾಂಕ್ ವೃತ್ತದ ಬಳಿ ದಲಿತ ಸಮುದಾಯದ ಜನರ ಸಮ್ಮುಖದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ಘೋಷಿಸಿದ್ದರು. ಅನಂತರದ ದಿನಗಳಲ್ಲಿ ನಗರ ಸಭೆ ನಿರ್ಣಯ ಮಾಡಿದೆ.

ಈಗಲೂ ಸಹ ರಸ್ತೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟು, ಕಟ್ಟಡಗಳಲ್ಲಿ ಮತ್ತು ಸಂಘ- ಸಂಸ್ಥೆಗಳು, ವಕೀಲರು ಅಷ್ಟೇ ಅಲ್ಲದೆ ಪತ್ರಿಕಾ ಕಚೇರಿ ವಿಳಾಸಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಎಂದು ನಮೂದಿಸಿದೆ. ನಗರಸಭೆ ನೀಡಲಾಗಿರುವ ಪರವಾನಿಗೆಯಲ್ಲಿಯೂ ಅಂಬೇಡ್ಕರ್ ರಸ್ತೆ ಎಂದು ದಾಖಲಾಗಿದೆ ಎಂದು ತಿಳಿಸಿ
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮೂಲ ಹೆಸರಾದ ಅಂಬೇಡ್ಕರ್ ರಸ್ತೆ ಎಂದು ನಮೂದಿಸಿ ಅಂಗಡಿಗಳ ಪರವಾನಿಗೆಯನ್ನು ನವೀಕರಿಸಬೇಕು ಎಂದು ನಿರ್ಣಯ ಮಾಡಲಾಗಿದೆ.

ಅದೇ ರೀತಿ ಅಂಬೇಡ್ಕರ್ ರಸ್ತೆ ಮತ್ತು ವೃತ್ತ ಇರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಲು ನಗರಸಭೆ ನಿರ್ಣಯಿಸಿದೆ, ಹಾಗೊಮ್ಮೆ ರಸ್ತೆಗೆ ಯಾವುದೇ ಹೆಸರು ನಾಮಕರಣ ಮಾಡಿರದಿದ್ದರೆ ಆ ರಸ್ತೆಗೆ ಯಾವ ಹೆಸರು ಪ್ರಚಲಿತವಾಗಿರುತ್ತದೊ ಅದೇ ಹೆಸರನ್ನ ನಾಮಕರಣ ಮಾಡಬೇಕೆಂಬ ನಿಯಮಾವಳಿ ಕರ್ನಾಟಕ ಪೌರಸಭೆಗಳ ಅಧಿನಿಯಮದಲ್ಲಿದೆ ಎಂದು ಮಾಹಿತಿ ನೀಡಿದೆ ಎಂದು ತಿಳಿಸಿದರು.

ನಗರಸಭೆಯ ನಿರ್ಣಯಕ್ಕೆ ನಾಗರೀಕರು ಆಕ್ಷೇಪ ವ್ಯಕ್ತಪಡಿಸಿದ್ದು. ಪರ್ಯಾಯ ಹೆಸರು ನಾಮಕರಣ ಮಾಡುವ ನಿರ್ಣಯವನ್ನು ಹಿಂಪಡೆಯಬೇಕು ಎಂದು ನಗರಸಭೆಯನ್ನು ನಾಗರಿಕರು ಒತ್ತಾಯಿಸಿದ್ದಾರೆ. ಅದೇ ರೀತಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ನಾಗರಿಕರು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ಮಾಡಲು ನಗರಸಭೆ ಮಾಡಿರುವ ನಿರ್ಣಯವನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘು ನಂದನ್, ಮಾಜಿ ಉಪಾಧ್ಯಕ್ಷ ಎಸ್ ಕುಮಾರಸ್ವಾಮಿ, ಎಸ್ಸಿ ಎಸ್ಟಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್ ಗುರುಮೂರ್ತಿ, ಮುಖಂಡರಾದ ಎಂ.ಎಸ್.ಮೂರ್ತಿ, ಎಂ ಪಿ ಶಿವರಾಮಮೂರ್ತಿ, ಲೋಕೇಶ್ವರ್, ಎಂ. ಎಲ್ ತುಳಸೀಧರ್, ಬಿ.ಪಿ.ಪ್ರಕಾಶ್, ನಟರಾಜ್, ವಕೀಲರಾದ ಜೆ.ರಾಮಯ್ಯ, ಮಹೇಶ್ ಕೃಷ್ಣ, ಲಕ್ಷ್ಮಣ್ ಚೀರನಹಳ್ಳಿ, ದೇವಾನಂದ್, ಸಂಪತ್ ಕುಮಾರ್, ಕೆಎಸ್ಆರ್ಟಿಸಿ ನಿವೃತ್ತ ನೌಕರ ಬಾಲರಾಜ್, ಪಾರಿವಾಳ ದಿನೇಶ್, ಸುದೇಶ್ ಪಾಲ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ