Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಕ್ಕೆ ಬರಿಗೈನಲ್ಲಿ ಬಂದ ಅಮಿತ್ ಶಾಗೆ ರೈತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ. ಬಡವರು, ರೈತರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆ ಹಾಗೂ ಮುಖಂಡರುಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ತಿಂಗಳಾದರೂ ಇಂದಿನವರೆಗೆ ಬರಗಾಲದ ಬಗ್ಗೆ ಒಂದು ಸಭೆಯನ್ನೂ ಅಮಿತ್ ಶಾ ಕರೆದಿಲ್ಲ. ಬರ ಪರಿಹಾರ ಕೊಡಲು ಇರುವ ಸಮಿತಿಗೆ ಅವರೇ ಅಧ್ಯಕ್ಷರು. ದೇಶದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ. ರೈತರು ಬರಗಾಲದಲ್ಲಿ ಕಷ್ಟ ಪಡುತ್ತಿದ್ದಾರೆ. ಬರಗಾಲ ಬಂದಾಗ ಎಂ.ಎನ್. ನರೇಗಾ ಯೋಜನೆಯಡಿ 150 ಮಾನವ ದಿನಗಳನ್ನು ಹೆಚ್ಚಿಸುವುದು ಕಡ್ಡಾಯವಾದರೂ, ಇಂದಿನವರೆಗೆ ಹೆಚ್ಚಿಸಿಲ್ಲ. 2-3 ಪತ್ರ ಬರೆದಿದ್ದರೂ ಉತ್ತರ ನೀಡಿಲ್ಲ ಎಂದು ಕಿಡಿಕಾರಿದರು.

ಅನ್ಯಾಯವನ್ನೆಲ್ಲಾ ಸರಿ ಎಂದು ಹೇಳಬಾರದು 

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈಗ ಅವರು ಬಿಜೆಪಿ ಜೊತೆ ಸೇರಿದ್ದಾರೆ. ಇದೇ ದೇವೆಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ದೇವೇಗೌಡರು ಈಗೇನು ಹೇಳುತ್ತಿದ್ದಾರೆ. ಅವರು ಯಜಮಾನರು, ಮಾಜಿ ಪ್ರಧಾನಿಗಳಾಗಿದ್ದವರು ಹೀಗೆ ಹೇಳಬಾರದು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಮಾಡಿದ ಅನ್ಯಾಯವನ್ನೆಲ್ಲಾ ಸರಿ ಎಂದು ಹೇಳಬಾರದು ಎಂದರು.

ಚಾಮರಾಜನಗರ, ಮೈಸೂರು ಕ್ಷೇತ್ರ ಎರಡನ್ನೂ ಗೆಲ್ಲಲಿದೆ 

ಚುನಾವಣೆ ರಣಕಹಳೆ ಮೈಸೂರಿನಿಂದಲೇ ಅಮಿತ್ ಶಾ ಮೊಳಗಿಸುತ್ತಿರುವ ಬಗ್ಗೆ ಮಾತನಾಡಿದ ಸಿಎಂ, ಚಾಮರಾಜನಗರ, ಮೈಸೂರು ಕ್ಷೇತ್ರ ಎರಡನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!