Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅತ್ಯಗತ್ಯ

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಜೂನ್ 25 ರಂದು ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ ಅವರು ಹೇಳಿದರು.

ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಚರಿಸುವ ಸಂಬಂಧ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತವು ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ 75ನೇ ವರ್ಷದ ಅಮೃತ ಮಹೋತ್ಸವದ ಹೊತ್ತಿನಲ್ಲಿ ದೇಶದೆಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮುಂದುವರೆದ ಭಾಗವಾಗಿ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ ಹಾಗೂ ಮದ್ದೂರು ತಾಲ್ಲೂಕಿನ ಶಿವಪುರ ಸತ್ಯಾಗ್ರಹ ಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳ ನೆನಪಿನಾರ್ಥವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ದಿನದಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ನಾಲ್ವಡಿ ಕೃಷ್ಣರಾಜ ಒಡೆಯರ ಸಭಾಂಗಣದವರೆಗೆ ಕನ್ನಡಾಂಬೆಯ ಕಂಚಿನ ವಿಗ್ರಹವನ್ನು ಒಳಗೊಂಡ ಮೆರವಣಿಗೆ ಸಾಗಲಿದೆ. ಹಾಗೂ ಮದ್ದೂರಿನ ನರಸಿಂಹಸ್ವಾಮಿ ದೇವಸ್ಥಾನದಿಂದ ಶಿವಪುರ ಸತ್ಯಾಗ್ರಹ ಸೌಧದವರೆಗೆ ಕನ್ನಡಾಂಬೆಯ ಭಾವಚಿತ್ರವನ್ನೊಳಗೊಂಡ ಮೆರವಣಿಗೆ ಸಾಗಲಿದೆ. ನಂತರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರಾಜೇಶ್ ಅಧ್ಮಾರ್ ಹಾಗೂ ಪಿ.ವಿ ವಸಂತ್ ಕುಮಾರ್ ಅವರು ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಒಳಗೊಂಡಂತೆ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.

ಎಂದಿನಂತೆ ಮೆರವಣಿಗೆಯಲ್ಲಿ ಕಲಾತಂಡಗಳೊಂದಿಗೆ ಎನ್‌.ಸಿ.ಸಿ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರ,ಶಾಲಾ ಕಾಲೇಜು ಮಕ್ಕಳು ಭಾಗವಹಿಸಲಿದ್ದು, ವೇದಿಕೆಯನ್ನು ತಳಿರು ತೋರಣದಿಂದ ಸಿಂಗರಿಸಲಾಗುವುದು ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಕಲ್ಪ ವಿಧಿ ಬೋಧನೆ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗುವುದು ಎಂದರು.

ಸ್ವತಂತ್ರ ಹೋರಾಟದ ಸ್ಮರಣೆ, ಸ್ಮಾರಕ ಶಿಲಾಫಲಕ ಅನಾವರಣ ಹಾಗೂ ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಉದಯ್ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ತುಷಾರಮಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ರಾಜು ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧನಂಜಯ್ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!