Wednesday, September 18, 2024

ಪ್ರಾಯೋಗಿಕ ಆವೃತ್ತಿ

ಅಮೃತ ನಗರೋತ್ಥಾನ ಯೋಜನೆ ಕಾಮಗಾರಿ ಪ್ರಾರಂಭಿಸಿ: ಸಚಿವ ಚಲುವರಾಯಸ್ವಾಮಿ

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ (ಹಂತ-4 )ಸ್ಥಳೀಯ ಸಂಸ್ಥೆಗಳಿಗೆ ಅನುಮೋದನೆಯಾದ ಕ್ರಿಯಾಯೋಜನೆಗಳ ಪೈಕಿ ಪ್ರಾರಂಭವಾಗದೆ ಇರುವ ಕಾಮಾಗಾರಿಗಳನ್ನು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಟೆಂಡರ್ ಕರೆದು ಪ್ರಾರಂಭಿಸಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಇಂದು ಮಂಡ್ಯ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ (ಹಂತ-4 ) ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ (ಹಂತ-4) ಜಿಲ್ಲೆಗೆ ಒಟ್ಟು 105 ಕೋಟಿ ರೂ ಹಂಚಿಕೆಯಾಗಿವೆ. ಇದರಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಕಾಮಗಾರಿಗಳನ್ನು ಶಾಸಕರುಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಂತ ಹಂತವಾಗಿ ಪೂರ್ಣಗೊಳಿಸಿ ಎಂದರು‌.

ಕುಡಿಯುವ ನೀರು, ಒಳಚರಂಡಿ, ರಸ್ತೆ ಅಭಿವೃದ್ಧಿ, ಮಳೆನೀರು ಚರಂಡಿ ಸೇರಿದಂತೆ ಇತರೆ ಯೋಜನೆಗಳ ಅಭಿವೃದ್ಧಿ ನಗರೋತ್ಥನಾದ ಉದ್ದೇಶವಾಗಿದ್ದು, ಇದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 8 ಕಾಮಾಗಾರಿಗಳು ಪ್ರಗತಿಯಲ್ಲಿದ್ದು, 5 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದೆ. 3 ಟೆಂಡರ್ ಕರೆಯಬೇಕಿದ್ದು, 9 ಕಾಮಗಾರಿಗಳು ಪೂರ್ಣಗೊಂಡಿವೆ. ಮದ್ದೂರು ವ್ಯಾಪ್ತಿಯಲ್ಲಿ 6 ಕಾಮಗಾರಿಗಳು ಪ್ರಗತಿಯಲ್ಲಿದ್ದು, 6 ಕಾಮಗಾರಿಗಳನ್ನು ಟೆಂಡರ್ ಕರೆಯಬೇಕಿದೆ. 7 ಕಾಮಗಾರಿಗಳು ಪೂರ್ಣಗೊಂಡಿವೆ. ಮಳವಳ್ಳಿ ವ್ಯಾಪ್ತಿಯಲ್ಲಿ 3 ಕಾಮಾಗಾರಿಗಳು ಪ್ರಗತಿಯಲ್ಲಿದ್ದು, 6 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದೆ. 4 ಟೆಂಡರ್ ಕರೆಯಬೇಕಿದ್ದು, 8 ಕಾಮಗಾರಿಗಳು ಪೂರ್ಣಗೊಂಡಿವೆ. ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ 7 ಕಾಮಗಾರಿಗಳನ್ನು ಟೆಂಡರ್ ಕರೆಯಬೇಕಿದ್ದು, 10 ಕಾಮಗಾರಿಗಳು ಪೂರ್ಣಗೊಂಡಿವೆ. ಕೆ,ಆರ್ ಪೇಟೆ ವ್ಯಾಪ್ತಿಯಲ್ಲಿ 3 ಕಾಮಾಗಾರಿಗಳು ಪ್ರಗತಿಯಲ್ಲಿದ್ದು, 7 ಕಾಮಗಾರಿ ಟೆಂಡರ್ ಕರೆಯಬೇಕಿದೆ. 5 ಕಾಮಗಾರಿಗಳು ಪೂರ್ಣಗೊಂಡಿವೆ. ಪಾಂಡವಪುರ ವ್ಯಾಪ್ತಿಯಲ್ಲಿ 7 ಕಾಮಾಗಾರಿಗಳು ಪ್ರಗತಿಯಲ್ಲಿದ್ದು, 10 ಕಾಮಗಾರಿ ಟೆಂಡರ್ ಕರೆಯಬೇಕಿದೆ. 1 ಕಾಮಗಾರಿಗಳು ಪೂರ್ಣಗೊಂಡಿವೆ. ನಾಗಮಂಗಲ ವ್ಯಾಪ್ತಿಯಲ್ಲಿ 4 ಕಾಮಾಗಾರಿಗಳು ಪ್ರಗತಿಯಲ್ಲಿದ್ದು, 5 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದೆ. 1 ಟೆಂಡರ್ ಕರೆಯಬೇಕಿದ್ದು, 6 ಕಾಮಗಾರಿಗಳು ಪೂರ್ಣಗೊಂಡಿವೆ. ಬೆಳ್ಳೂರು ವ್ಯಾಪ್ತಿಯಲ್ಲಿ 6 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದೆ. 1 ಟೆಂಡರ್ ಕರೆಯಬೇಕಿದ್ದು, 7 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಅವರು ಸಭೆಗೆ ಮಾಹಿತಿ ನೀಡಿದರು.

ಸ್ವಚ್ಛ ಭಾರತ್ ಯೋಜನೆಯಡಿ ಮದ್ದೂರು ಪುರಸಭೆ- 72.75 ಲಕ್ಷ ರೂ, ಮಳವಳ್ಳಿ ಪುರಸಭೆ- ರೂ 34.70 ಲಕ್ಷ ರೂ, ಶ್ರೀರಂಗಪಟ್ಟಣ ಪುರಸಭೆ- 67.08 ಲಕ್ಷ ರೂ, ಕೆ.ಆರ್.ಪೇಟೆ ಪುರಸಭೆ- 26.07 ಲಕ್ಷ ರೂ ಲಭ್ಯವಿದ್ದು, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಘನ ತ್ಯಜ್ಯ ವಿಲೇವಾರಿಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಶಾಸಕರುಗಳಾದ ಪಿ.ಎಂ ನರೇಂದ್ರಸ್ವಾಮಿ, ಪಿ.ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ ಪುಟ್ಟಣ್ಣಯ್ಯ, ಕೆ.ಎಂ ಉದಯ್, ಕೆ.ಟಿ ಮಂಜು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಯ ಶೇಖ್ ತನ್ವಿ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು‌.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!