Friday, September 20, 2024

ಪ್ರಾಯೋಗಿಕ ಆವೃತ್ತಿ

ಗಾಂಧೀಜಿ ಬಿಟ್ಟರೆ ಸತ್ಯ ಹೇಳುವುದು ಕುಮಾರಸ್ವಾಮಿ ಮಾತ್ರ: ಚಲುವರಾಯಸ್ವಾಮಿ ವ್ಯಂಗ್ಯ

ಮಹಾತ್ಮ ಗಾಂಧೀಜಿ ಅವರನ್ನು ಹೊರತುಪಡಿಸಿದರೆ ದೇಶದಲ್ಲಿ ಸತ್ಯ ಹೇಳುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದ್ದು ಎರಡು ತಲೆ ರಾಜಕೀಯ ಎಂಬ ಎಚ್‌ಡಿಕೆ ಟ್ವೀಟ್ ವಿಚಾರಕ್ಕೆ ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ತಲೆ ಮತ್ತು ಹೃದಯಕ್ಕೆ ಕನೆಕ್ಷನ್ ಇಲ್ಲದಂತೆ ಮಾತನಾಡುತ್ತಾರೆ. ಈ ಹಿಂದೆ ಆರ್‌ಎಸ್‌ಎಸ್, ಬಿಜೆಪಿ ಬಗ್ಗೆ ಹೇಗೆ ಮಾತನಾಡಿದ್ದರೂ ಎಂಬುದನ್ನು ನೋಡಿದ್ದೇವೆ. ಈಗ ಏನು ಮಾಡುತ್ತಿದ್ದಾರೆಂದು ಎಲ್ಲರಿಗೂ ಗೊತ್ತು. ಎಚ್‌ಡಿಕೆ ಹುಟ್ಟುತ್ತಲೇ ಎಲ್ಲ ಪರಿಣಿತಿ ಹೊಂದಿದ್ದಾರೆ. ಅವರು ಯಾರ ಸಲಹೆಯನ್ನು ತೆಗೆದುಕೊಳ್ಳಲ್ಲ. ಅವರಿಗೆ ಈಗ ಯಾರು ಬಿಜೆಪಿ ಸಹವಾಸ ಮಾಡಲು ಹೇಳಿದ್ದಾರೋ ಗೊತ್ತಿಲ್ಲ ಎಂದು ಟೀಕಿಸಿದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಜತೆ ಮಾತನಾಡಿದ ತಕ್ಷಣ ಪಕ್ಷ ಸೇರುತ್ತಾರೆ ಅಂತಲ್ಲ. ನಾನು ಮೊದಲೇ ಹೇಳಿದ್ದೆ, ಜಿಲ್ಲೆಯಲ್ಲಿ ಒಂದಷ್ಟು ಜನ ಕಾಂಗ್ರೆಸ್‌ ಪಕ್ಷಕ್ಕೆ  ಬರುತ್ತಾರೆ ಅಂತಾ. ಇನ್ನೂ 10 ದಿನಗಳ ಒಳಗೆ ಇದರ ಬಗ್ಗೆ ಚಿತ್ರಣ ಗೊತ್ತಾಗುತ್ತದೆ. ಪಕ್ಷಕ್ಕೆ ಬರುವವರು ಕಂಡಿಷನ್ ಹಾಕಿಲ್ಲ, ಅದರಂತೆ ನಾವು ಕೂಡ ಹೇಳಿಲ್ಲ. ನಾರಾಯಣಗೌಡ ಅವರು ಬರುತ್ತಾರೆ ಅನ್ನೋದನ್ನು ಹೇಳಲ್ಲ. ಬೇರೆ ಅವರು ಬರಲ್ಲವೆಂದೂ ಹೇಳಲ್ಲ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್‌ನಿಂದಲೂ ಕಾಂಗ್ರೆಸ್‌ಗೆ ಬರುತ್ತಾರೆ. ಜೆಡಿಎಸ್ ವಾತಾವರಣ ಸರಿ ಇಲ್ಲವೆಂದು ನಾರಾಯಣಗೌಡ ಬಿಜೆಪಿಗೆ ಹೋದರು. ಈಗ ಬಿಜೆಪಿ-ಜೆಡಿಎಸ್ ಒಂದಾದ ಮೇಲೆ ಅವರು ಹೇಗೆ ಇರುತ್ತಾರೆ. ಬಿಜೆಪಿಯವರಿಗೆ ಮಂಡ್ಯದಲ್ಲಿ ಪ್ರಾಮುಖ್ಯತೆ ಸಿಗಲ್ಲ. ಇಲ್ಲಿ ಬಿಜೆಪಿಗಿಂತ ಜೆಡಿಎಸ್‌ಗೆ ಪ್ರಾಮುಖ್ಯತೆ. ಅದಕ್ಕೆ ಬಿಜೆಪಿಯಿಂದ ಅವರಿಗೆ ಅಸಮಾಧಾನವಾಗುತ್ತಿದೆ. ನಾವು ಆಪರೇಷನ್ ಹಸ್ತ ಮಾಡಿಲ್ಲ. ಎಲ್ಲರೂ ಅವರ ಪಕ್ಷದಲ್ಲಿ ಅಸಮಾಧಾನ ಅನುಭವಿಸಿ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅದರಂತೆ ನಾರಾಯಣಗೌಡ ಅವರಿಗೆ ಕಾಂಗ್ರೆಸ್ ಬರಲು ಆಸಕ್ತಿ ಇದೆ ಎಂದು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ಮಾಡಿದರ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪತ್ರ ವ್ಯವಹಾರ ಮಾಡಿದೆ. ಕೇಂದ್ರದಿಂದ ನಮಗೆ ಸ್ಪಂದನೆ ಸಿಗದಿದ್ದರಿಂದ ನಾವು ಪ್ರತಿಭಟನೆ ಮಾಡಿದ್ದೇವೆ. ಹಣಕಾಸಿನ ಅಂಕಿ ಅಂಶಗಳ ವಿಚಾರಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾವು 15 ಸಾವಿರ ಕೋಟಿ ರೂ ಕೇಳಿದ್ದೀವಿ, ಅವರು ಎಷ್ಟಾದರೂ ಕೊಡಲಿ. ನಾವು ಇಷ್ಟೆ ಕೊಡಿ ಎಂದೂ ಒತ್ತಡ ಹಾಕಲ್ಲ ಇದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.

ಬಿಜೆಪಿ ಸಂಸದರಿಗೆ ನಾವು ಯಾವ ಭಾಷೆಯಲ್ಲಿ ಹೇಳಬೇಕು. ಐದು ತಿಂಗಳು ಕಳೆದರೂ ಬರ ಪರಿಹಾರ ಕೊಟ್ಟಿಲ್ಲ. ಬಿಜೆಪಿಗೆ ನೈತಿಕತೆ ಇದ್ದರೆ ಇವರ್‍ಯಾರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು. ನಮ್ಮ ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕಮಿಟ್‌ಮೆಂಟ್ ಇರಬೇಕು. ಹೋರಾಟಕ್ಕೆ ಸ್ವಾಭಿಮಾನಿ ಸಂಸದರು ಬರಲಿಲ್ಲ. ಡಿ.ಕೆ.ಸುರೇಶ್ ಬಿಟ್ಟರೆ ಯಾರೂ ಬರಲಿಲ್ಲ ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ಅವರನ್ನು ಟೀಕಿಸಿದರು.

ಫೆ.9ರ ಮಂಡ್ಯ ನಗರ ಬಂದ್‌ಗೆ ಕರೆ ಕೊಟ್ಟವರು ಕಾನೂನು ಹಾಗೂ ಸಂವಿಧಾನದ ವಿರುದ್ದ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಜನರು ನೆಮ್ಮದಿಯಿಂದ ಇರಲು ಬಿಡಿ. ಬಿಜೆಪಿಯವರು ಜೆಡಿಎಸ್ ಜತೆ ಸೇರಿ ಶಕ್ತಿ ಬಂದಿರಬಹುದು. ಇದರ ಹಿಂದೆ ಬಿಜೆಪಿ, ಜೆಡಿಎಸ್ ನೇತೃತ್ವ ವಹಿಸಿದೆಯೋ ನನಗೆ ಗೊತ್ತಿಲ್ಲ. ಕೆರಗೋಡಿನಲ್ಲಿ ಹಾರಿಸಿರುವ ರಾಷ್ಟ್ರಧ್ವಜ ಇಳಿಸಬೇಕಾ, ಬೇಡವೇ ಎಂದು ಸ್ಪಷ್ಟಪಡಿಸಲಿ ಎಂದು ತಿಳಿಸಿದರು.

ಈಗಾಗಲೇ ಕೆರಗೋಡಿನಲ್ಲಿ ಜಿಲ್ಲಾಧಿಕಾರಿ ಸಭೆ ಮಾಡಿ ಮಾತಾಡಿದ್ದಾರೆ. ಗ್ರಾಮಸ್ಥರು ನಿಖರವಾಗಿ ತಮ್ಮ ಪ್ರಸ್ತಾವನೆ ಇಟ್ಟಿಲ್ಲ. ಪಂಚಾಯಿತಿ ಜಾಗದಲ್ಲಿ ಎಲ್ಲಿಯೂ ರಾಷ್ಟ್ರಧ್ವಜ ಹಾಗೂ ಕನ್ನಡಧ್ವಜ ಹೊರತು ಪಡಿಸಿ ಇತರೆ ಧ್ವಜ ಹಾರಿಸಲು ಅವಕಾಶ ಇಲ್ಲ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!