Thursday, November 19, 2026

ಪ್ರಾಯೋಗಿಕ ಆವೃತ್ತಿ

ಮರಗಿಡಗಳಲ್ಲಿ ದೈವಭಕ್ತಿ ಕಾಣುತ್ತಿದ್ದ ಹಿರಿಯರು : ಅಣ್ಣೂರು ಸತೀಶ್

ಗುರು – ಹಿರಿಯರು ಮರಗಿಡಗಳಲ್ಲಿ ದೈವಭಕ್ತಿಯನ್ನು ಕಾಣುತ್ತಿದ್ದರು, ಆದರೆ ಇಂದು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಳನ್ನು ಹನನ ಮಾಡುತ್ತಿರುವುದೇ ಹೆಚ್ಚಾಗಿದೆ ಎಂದು ಪರಿಸರ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಅಣ್ಣೂರು ಸತೀಶ್ ಆತಂಕ ವ್ಯಕ್ತಪಡಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಯಲಾದಹಳ್ಳಿ ಗ್ರಾಮದಲ್ಲಿ ಭಾರತೀನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2 ನೇ ದಿನದ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ತಾಲ್ಲೂಕು ಘಟಕ ಸಹಯೋಗದಲ್ಲಿ ನಡೆದ ‘ಪರಿಸರ ಉಳಿವು’ ಕುರಿತು ಉನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವನ ದುರಾಸೆಯಿಂದ ಇಂದು ಪರಿಸರ ನಾಶಗೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ಪರಿಶುದ್ದ ಗಾಳಿ, ಉತ್ತಮ ಪರಿಸರ ಪಡೆಯಲು ಕಷ್ಟವಾಗಿದೆ. ಆದ್ದರಿಂದ ಯುವಪೀಳಿಗೆ ಮತ್ತು ಪ್ರತಿಯೊಬ್ಬರು ಮರಗಿಡಗಳನ್ನು ಬೆಳೆಸಿ ಪೋಷಿದರೆ ಮಾತ್ರ ಉತ್ತಮ ಪರಿಸರವನ್ನು ಕಾಣಲು ಸಾಧ್ಯ ಎಂದರು.

ಪರಿಸರ ಜಾಗೃತಿ ವೇದಿಕೆಯ ತಾಲ್ಲೂಕು ಉಪಾಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ ಮಾತನಾಡಿ, ಹಿರಿಯರ ಪರಿಸರ ಪ್ರಜ್ಞೆಯಿಂದಾಗಿಯೇ ಲಕ್ಷಾಂತರ ವರ್ಷಗಳಿಂದ ಪ್ರಕೃತಿ ಸಂಪತ್ತು ನಮ್ಮೆಲ್ಲರ ಬದುಕಿಗೆ ಆಸರೆಯಾಗಿತ್ತು. ಮನುಷ್ಯ ಪರಿಸರದ ಒಂದು ಭಾಗ. ಹಿರಿಯರು ಪರಿಸರಕ್ಕೆ ಪೂರಕವಾಗಿ ಬದುಕನ್ನು ಕಟ್ಟಿಕೊಂಡಿದ್ದರು. ಆದರೆ ಇಂದು ಅಭಿವೃದ್ದಿ ಹೆಸರಿನಲ್ಲಿ ಪ್ರಕೃತಿಯ ಒಡಲನ್ನು ಬರಿದಾಗಿಸುತ್ತಿದ್ದಾರೆ. ಕೆಲವರ ಸುಖಕ್ಕೆ ಪ್ರಕೃತಿ ಸಂಪತ್ತು ಲೂಟಿಯಾಗುತ್ತಿದೆ ಎಂದು ವಿಷಾಧಿಸಿದರು.

ಪರಿಸರ ಪ್ರೇಮಿ ಅಣ್ಣೂರು ಜಗದೀಶ್ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಮಕ್ಕಳು-ಯುವಕರು ಸಂಕಲ್ಪ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಆಮ್ಲಜನಕ ಕಡಿಮೆಗೊಂಡು ಜನರು ರೋಗಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಮರಗಿಡಗಳನ್ನು ಬೆಳೆಸಬೇಕೆಂದು ಕಿವಿಮಾತು ಹೇಳಿದರು.

ಭಾರತೀನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕ ತೈಲೂರು ರಂಗನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಪರಿಸರ ಜಾಗೃತಿ ವೇದಿಕೆ ನಿರ್ದೇಶಕ ಅಂಬರಹಳ್ಳಿ ಆನಂದ್, ಕರಡಕೆರೆ ಯೋಗೇಶ್, ರಘು ವೆಂಕಟೇಗೌಡ, ಗೋ ಪ್ರೇಮಿ ಗೌರಿಶಂಕರ್, ಸಬ್ಬನಹಳ್ಳಿ ಕುಮಾರ್, ಮನೋಜ್ ಗ್ರಾ.ಪಂ ಸದಸ್ಯ ಮನು, ಶಿಬಿರಾಧಿಕಾರಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ