Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಕೆ.ಆರ್.ಎಸ್. ಹಿನ್ನಿರಿನ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕ

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಬಸ್ತಿ ಹೊಸಕೋಟೆಯ ಪಕ್ಕದಲ್ಲಿ ಕೆ.ಆರ್.ಎಸ್. ಹಿನ್ನಿರಿನಲ್ಲಿರುವ 18 ಅಡಿ ಎತ್ತರದ ಬಸ್ತಿ ಗೊಮ್ಮಟಮೂರ್ತಿಗೆ ಮಹಾಮಸ್ತಕಾಭಿಷೇಕವು ಸಾವಿರಾರು ಜೈನಧರ್ಮದ ಬಂಧುಗಳ ಸಮಕ್ಷಮದಲ್ಲಿ ಶ್ರದ್ದಾ ಭಕ್ತಿಯಿಂದ ನೆರವೇರಿತು.

ಗುಜರಾತ್ ರಾಜ್ಯದಿಂದ ಆಗಮಿಸಿದ್ದ ಯುಗಳ ಜೈನ ಯತಿಗಳಾದ ಅಮೋಘ ಕೀರ್ತಿ ಮಹಾರಾಜರು ಮತ್ತು ಅಮರಕೀರ್ತಿ ಮಹಾರಾಜ ಯತಿಗಳು ಬಸ್ತಿ ಗುಮ್ಮಟನಿಗೆ ವಿಶೇಷ ಮಹಾಮಸ್ತಕಾಭಿಷೇಕ ನೆರವೇರಿಸಿ ಭಕ್ತಾದಿಗಳಿಗೆ ದರ್ಶನ ನೀಡಿ ಆಶೀರ್ವಚನ ನೀಡಿದರು.

ಚಾತುರ್ಮಾಸದ ಅಂಗವಾಗಿ ಪವಿತ್ರ ಜೈನ ಕ್ಷೇತ್ರವಾದ ಹಾಸನ ಜಿಲ್ಲೆಯ ಶ್ರವಣಬೆಳಗೊಳಕ್ಕೆ ತೆರಳುವ ವೇಳೆ ದಿಗಂಬರ ಜೈನಯತಿಗಳು ತಾಲೂಕಿನ ಬಸ್ತಿ ಹೊಸಕೋಟೆ ಗ್ರಾಮದಲ್ಲಿ ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ಏಕಾಂಗಿಯಾಗಿ ನೆಲೆ ನಿಂತಿರುವ 18 ಅಡಿ ಎತ್ತರದ ಗೊಮ್ಮಟ ವಿಗ್ರಹಕ್ಕೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಮಹಾಮಸ್ತಕಾಭಿಷೇಕವನ್ನು ನೆರವೇರಿಸಿದರು.

ಕೃಷ್ಣರಾಜಪೇಟೆ ತಾಲೂಕಿನ ಬಸ್ತಿ ಕ್ಷೇತ್ರಕ್ಕೆ ಆಗಮಿಸಿದ ಮಹಾರಾಜ ಯತಿವರ್ಯರು ಎರಡು ದಿನಗಳ ಕಾಲ ಬಸ್ತಿ ಗೊಮ್ಮಟನ ಸನ್ನಿಧಿಯಲ್ಲಿಯೇ ವಾಸ್ತವ್ಯ ಮಾಡಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಸಾಲಿಗ್ರಾಮ, ಮೈಸೂರು, ಬೆಂಗಳೂರು, ಬೆಳ್ಳೂರು, ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಜೈನ ಧರ್ಮದ ಬಂಧುಗಳು ಯತಿಗಳ ದರ್ಶನವನ್ನು ಪಡೆದು ಪಾದಪೂಜೆ ನೆರವೇರಿಸಿ ಕೃತಾರ್ಥರಾದರು.

ಬಸ್ತಿಗೊಮ್ಮಟ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಯತಿವರ್ಯರು ಅರಿಶಿಣ, ಕುಂಕುಮ, ಶ್ರೀಗಂಧ, ಎಳನೀರು,ಜೇನುತುಪ್ಪ, ಹಾಲು, ಮೊಸರು, ಪವಿತ್ರ ಗಂಗಾಜಲ ಸೇರಿದಂತೆ ಸಾವಿರಾರು ಕಳಶಗಳಲ್ಲಿ ಸಂಗ್ರಹಿಸಿದ್ದ ವಿವಿಧ ಬಗೆಯ ಜಲಾಭಿಷೇಕದ ಮೂಲಕ ಮಸ್ತಕಾಭಿಷೇಕದ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ