Monday, October 21, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಮುನ್ನಡೆ- ಕರ್ನಾಟಕ ಜನಶಕ್ತಿಯಿಂದ ಹೆಣ್ಣು ಭ್ರೂಣಹತ್ಯೆ ವಿರೋಧಿ ಅಭಿಯಾನಕ್ಕೆ ಚಾಲನೆ

ಅಕ್ಟೋಬರ್ 2,2024ರಂದು ಗಾಂಧಿ ಜಯಂತಿಯ ದಿನದಂದು ಮಂಡ್ಯದಲ್ಲಿ ಗಾಂಧಿ ಪ್ರತಿಮೆಯ ಮುಂದೆ, ಹೆಣ್ಣು ಭ್ರೂಣ ಹತ್ಯೆವಿರೋಧಿ ಅಭಿಯಾನಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿಯ ವತಿಯಿಂದ ಚಾಲನೆ ಕೊಡಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಯಲ್ಲಿ ಮಂಡ್ಯ ಪ್ರಥಮ ಸ್ಥಾನ ಪಡೆಯಲು ಪೈಪೋಟಿಗೆ ಬಿದ್ದಂತಾಗಿದೆ. ಗಾಂಧಿಜಿಯವರು ಮಹಿಳೆಯರ ಸ್ವಾತಂತ್ರ್ಯ ಸಮಾನತೆ ಬಗ್ಗೆ ಕನಸ್ಸು ಕಂಡಿದ್ದರು, ನಮ್ಮ ನೆಲದಲ್ಲಿನ ಯಾವುದೇ ಹೆಣ್ಣು ಮಗು ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ಓಡಾಡುವ ದಿನ ಬಂದಾಗ ಮಾತ್ರ ಈ ದೇಶ ನಿಜವಾದ ಅರ್ಥದಲ್ಲಿ ಸ್ವತಂತ್ರ್ಯ ಭಾರತವಾಗುತ್ತದೆ ಎಂಬ ಕನಸು ಕಂಡಿದ್ದರು. ಆದರೆ ಇವತ್ತಿನ ದಿನಗಳಲ್ಲಿ ಮಧ್ಯರಾತ್ರಿ ಇರಲಿ ಹಗಲಿನಲ್ಲಿಯೇ ನಿರ್ಭಯವಾಗಿ ಓಡಾಡುವ ವಾತವರಣವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಅತ್ಯಾಚಾರ ದೌರ್ಜನ್ಯ, ಕಿರುಕುಳದ ಪ್ರಕರಣಗಳು ಹೆಗ್ಗಿಲ್ಲದೆ ನಡೆಯುತ್ತಿದೆ. ಹೆಣ್ಣಿನ ಶೋಷಣೆ ಭ್ರೂಣದಲ್ಲಿಯೇ ಪ್ರಾರಂಭವಾಗುತ್ತದೆ, ಕೊನೆಗೆ ಕ್ರೌರ್ಯದ ಕೊಲೆಗಳಲ್ಲಿ ಕೊನೆಗೊಳ್ಳುತ್ತದೆ, ಇತ್ತೀಚಿನ ದಿನಗಳಲ್ಲಿ ಭ್ರೂಣ ಹತ್ಯೆ,ಅತ್ಯಾಚಾರ, ದೌರ್ಜನ್ಯಗಳ ಜೊತೆಗೆ ಹೆಣ್ಣು ಮಕ್ಕಳನ್ನು ತುಂಡು ತುಂಡಾಗಿ ಕತ್ತರಿಸುವ,ಕತ್ತುಸೀಳುವ ಚಾಕುವಿನಿಂದ ಹಿರಿದು ಕೊಲ್ಲುವ ಪ್ರೌರುತ್ತಿ ಸಮಾಜದಲ್ಲಿ ಸರ್ವೆ ಸಾಮಾನ್ಯ ಎಂಬಂತೆ ಹೆಗ್ಗಿಲ್ಲದೆ ನಡೆಯುತ್ತಿದೆ. ಇದು ಸಹಜ ಅಲ್ಲ ಮತ್ತು ಹೆಣ್ಣು ಮಕ್ಕಳ ಮೇಲಿನ ಈ ಕ್ರೌರ್ಯ ಒಪ್ಪಿತವಾದುದ್ದಲ್ಲ ಎಂದು ಈ ಸಮಾಜದ ಪ್ರತಿಯೊಬ್ಬ ನಾಗರಿಕರ ಪ್ರತಿರೋಧ ದಾಖಲಾಗಬೇಕು. ಹಾಗಾಗದೆ ಎಲ್ಲವೂ ಸಮ್ಮತಿಯೇ ಎಂದು ಜನಸಾಮನ್ಯರು ಮತ್ತು ನಾಗರೀಕ ಸಮಾಜ ಮೌನತಾಳುತ್ತಿರುವುದು ಆತಂಕ ಮತ್ತು ಬೆಸರ ತರಿಸುವ ಸಂಗತಿಯಾಗಿದೆ. ಹೆಣ್ಣಿಲ್ಲದ ಸಮಾಜದ ಪರಿಕಲ್ಪನೆಯನ್ನು ಊಹಿಸಕೊಳ್ಳಲು ಕೂಡಾ ಸಾಧ್ಯವಿಲ್ಲ ಇನ್ನಾದರೂ ಈ ಎಲ್ಲಾ ದೌರ್ಜನ್ಯಗಳ ವಿರುದ್ಧ ಜನಸಾಮಾನ್ಯರು,ಎಲ್ಲಾ ಸಂಘಟನೆಗಳು ಮತ್ತು ಸಮಾಜ ಮಾತಾಡುವಂತಾಗಬೇಕು ಎಂದರು.

ಮಂಡ್ಯ ಜನರು ತಲೆತಗ್ಗಿಸುವ ಸಂಗತಿ

ಮಂಡ್ಯದ ಹಾಡ್ಯದ ಆಲೆ ಮನೆ ಪ್ರಕರಣ, ಕರ್ನಾಟಕದ ಜನರೆದುರು ಮಂಡ್ಯ ಜಿಲ್ಲೆಯ ಜನರು ತಲೆತಗ್ಗಿಸುವ ಸಂಗತಿ. ಹೆಚ್ಚುತ್ತಿರುವ ಈ ಅನಿಷ್ಟ ಪಿಡುಗು ಮತ್ತು ಹೆಣ್ಣು ಭ್ರೂಣ ಹತ್ಯೆಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರೆ ಹೆಚ್ಚು ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ನಾಚಿಕೇಡಿನ ಸಂಗತಿ,ಹೆಣ್ಣು ಭ್ರೂಣಹತ್ಯೆಯ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳೆ ಮತ್ತೆ ಜಾಮೀನಿನ ಮೇಲೆ ಹೊರ ಬಂದು ಮತ್ತದೆ ಕೃತ್ಯಗಳಲ್ಲಿ ಭಾಗಿ ಯಾಗುತ್ತಿರುವುದು, ನಮ್ಮ ಕಾನೂನಿನ ದೌರ್ಬಲ್ಯವನ್ನು ಎತ್ತಿ ತೋರುತ್ತದೆ.ಪಾಂಡವ ಪುರಮೂಲದ ಮಹಿಳೆ ಈ ಅನಿಷ್ಟ ಭ್ರೂಣ ಹತ್ಯೆ ಕ್ರಿಯೆಗೆ ಒಳಗಾಗಿ ಅತಿಯಾದ ರಕ್ತ ಸ್ರಾವದಿಂದ ಪ್ರಾಣ ಕಳೆದುಕೊಳ್ಳ ಬೇಕಾಗಿ ಬಂದಿದೆ.ಈಗೆ ನಡೆಯುತ್ತಿರುವ ಸಾವಿರಾರು ಹೆಣ್ಣು ಮಕ್ಕಳ ಮಾರಣಹೋಮ‌ದ ವಿರುದ್ಧ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ಕೈಗೆತ್ತಿಕೊಂಡಿರುವ ಹೆಣ್ಣು ಭ್ರೂಣ ಹತ್ಯೆ ವಿರೋಧಿ ಅರಿವಿನ ಅಭಿಯಾನಕ್ಕೆ ಇಲ್ಲಿನ ಜಿಲ್ಲಾಡಳಿತ ಸರ್ಕಾರ ಮತ್ತು ನಾಗರೀಕ ಸಮಾಜ, ಬೆಂಬಲ ನೀಡಿ ಅನಿಷ್ಟ ಪಿಡುಗನ್ನು ತಡೆಗಟ್ಟಲು ಜೊತೆಯಾಗಿ ಶ್ರಮಿಸೊಣ ಎಂದು ತಿಳಿಸಿದರು.

ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚುತ್ತಿವೆ

ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಈ ನೆಲದಲ್ಲಿ ಪುರುಷ ಪ್ರಾಧಾನ್ಯತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾ ಹೆಣ್ಣನ್ನು ಕೀಳು, ಕನಿಷ್ಠ, ಹೊರೆ ಎಂಬ ಮನೋಭಾವ ದಿಂದಾಗಿ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚುತ್ತಿವೆ, ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ ಮತ್ತು ಸೊಸೆಯಾಗಿಬೇಕು. ಆದರೆ ಮಗಳಾಗಿ ಮಾತ್ರ ಬೇಡ ಎನ್ನುವುದು ನೀಚ ಮನಸ್ಥಿತಿ. ಈ ಮನಸ್ಥಿತಿಗಳ ವಿರುದ್ದ ಹೋರಾಟ ನಡೆಸಬೇಕು ಸರ್ಕಾರಗಳು ಇರುವ ಕಾನೂನುಗಳನ್ನು ಇನ್ನೂ ಕಠಿಣಗೊಳಿಸಿ ಹೆಣ್ಣು ಭ್ರೂಣ ಹತ್ಯೆ ನಡೆಸುವರ ವಿರುದ್ದ ಕ್ರಮ ಕೈಗೊಳ್ಳಬೇಕು.ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆಗಳು,ಕೊಲೆಗಳ ವಿರುದ್ದ ಧ್ವನಿ ಎತ್ತ ಬೇಕಾಗಿರುವುದು ಪ್ರತಿ ನಾಗರೀಕನ ಕರ್ತವ್ಯ.ನನಗೆ ಜನ್ಮ ನೀಡಿದವಳು ಕೂಡಾ ಹೆಣ್ಣೆ ಅಂತಹ ಹೆಣ್ಣಿನ ಘನತೆ ನಮ್ಮೆಲ್ಲರ ಆದ್ಯತೆ ಆಗಬೇಕು ಎಂದು ತಿಳಿಸಿದರು.

ಅನಿಷ್ಟ ಪಿಡುಗನ್ನು ತಡೆಗಟ್ಟಲು ಶ್ರಮಿಸಬೇಕಿದೆ

CITU ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಗಾಂಧಿ ಜಯಂತಿಯಂದು ಈ ಹೆಣ್ಣು ಭ್ರೂಣ ಹತ್ಯೆ ವಿರೋಧಿ ಅಭಿಯಾನಕ್ಕೆ ಚಾಲನೆಕೊಟ್ಟಿರುವ ಮಹಿಳಾ ಮುನ್ನಡೆಯ ಜೊತೆಗೆ CITU ಸಂಘಟನೆ ಕೂಡಾ ಬೆಂಬಲವಾಗಿ ನಿಲ್ಲುತ್ತದೆ. ಮಂಡ್ಯದಲ್ಲಿ ಹೆಚ್ಚುತ್ತಿರುವ ಅನಿಷ್ಟ ಪಿಡುಗನ್ನು ತಡೆಗಟ್ಟಲು ನಾವೆಲ್ಲರೂ ಜೊತೆಯಾಗಿ ನಿಂತು ಶ್ರಮವಹಿಸಬೇಕಿದೆ. ಹೆಣ್ಣೆಂದರೆ ಹೊರೆ ಹೆಣ್ಣೆಂದರೆ ಕೀಳು,ಕನಿಷ್ಟ ಎನ್ನುವ ಮನಸ್ಥಿತಿ ಹಾಗೂ ಪುತ್ರ ವ್ಯಾಮೋಹದಿಂದ ಹೆಣ್ಣನ್ನು ಭ್ರೂಣದಲ್ಲಿಯೇ ಕೊಲ್ಲಲಾಗುತ್ತಿದೆ.ಆದರೆ ಪ್ರಕೃತಿಯ ಸೃಷ್ಟಿಯಲ್ಲಿ ಇಬ್ಬರು ಬಹಳ ಪ್ರಮುಖರು ಮತ್ತು ಸಮಾನರು ಎಂಬುದನ್ನು ಅರಿಯುವಲ್ಲಿ ಸಮಾಜ ಸೋಲುತ್ತಿದೆ.ಸಂತಾನೋತ್ಪತ್ತಿಯ ಪ್ರಕ್ರಿಯೆಯಲ್ಲಿ ಲಿಂಗ ನಿರ್ಧಾರವಾಗುವುದು ಗಂಡಿನಿಂದಲೆ ಹೊರತು ಹೆಣ್ಣಿನಿಂದಲ್ಲ ಎಂದು ಅರಿಯದ ಸಮಾಜ ಹೆಣ್ಣಿನ ಮೇಲೆ ನಿರಂತರ ಶೋಷಣೆ ನಡೆಸುತ್ತಾ ಬರುತ್ತಿದೆ ಇದನ್ನು ಸರ್ಕಾರಗಳು ಕೂಡಾ ಹೆಚ್ಚಿನ ಅರಿವಿನ ಕಾರ್ಯಕ್ರಮದ ಮೂಲಕ ತಡೆಗಟ್ಟು
ವಂತಾಗಬೇಕು. ಸಂಘ ಸಂಸ್ಥೆಗಳಾದ ನಾವು ಕೂಡಾ ಈ ಅನಿಷ್ಟ ಪಿಡುಗಿನ ವಿರುದ್ಧ ದುಡಿಯುವ ಪಣತೊಡೋಣ ಈ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಲತಾ ಶಂಕರ್, ಮಹಿಳಾ ಮುನ್ನಡೆಯ ಶಿಲ್ಪ ಜ್ಯೋತಿ, ಸೌಮ್ಯ, ಶಾಂತ, ರೇವತಿ ಮಮತ, ಶೃತಿ, ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಮುಖಂಡರಾದ ಚಂದ್ರು,ರವಿ ಅರುಣ, ಅಭಿಷೇಕ್ ವಿದ್ಯಾರ್ಥಿ ಸಂಘಟನೆಯ ಉದಯ್, ನಿತ್ಯಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!