Monday, September 23, 2024

ಪ್ರಾಯೋಗಿಕ ಆವೃತ್ತಿ

ಉತ್ತರ ಭಾರತದ ಮಾದರಿಯ ಕಾವೇರಿ ಆರತಿಗೆ ಅಪಸ್ವರ: ಪ್ರತಿಭಟನೆಯ ಎಚ್ಚರಿಕೆ

ಉತ್ತರ ಭಾರತದ ಗಂಗಾರತಿ ಮಾದರಿಯಲ್ಲಿ ಕೆ.ಆರ್.ಎಸ್ ನಲ್ಲಿ ಕಾವೇರಿ ಆರತಿ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಹಾಗೂ ಮಂಡ್ಯ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿರುವ ‘ನಾವು ದ್ರಾವಿಡ ಕನ್ನಡಗರು’ ಸಂಘಟನೆಯೂ ಬಸವಣ್ಣನವರ ವಚನ ಸಮಾಲೋಚನೆ ನಡೆಸುವಂತೆ ಆಗ್ರಹಿಸಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಕೆಲವು ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಇಂಡಿಯಾ ಒಕ್ಕೂಟದ ಹಿಂದುಳಿದ ರಾಜ್ಯಗಳಾದ ಉತ್ತರಖಂಡ , ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಸ್ಪೃಶ್ಯತೆ, ಜಾತಿ ಅಸಮಾನತೆ ಮತ್ತು ನದಿ ನೀರಿನಲ್ಲಿ ಕೊಳಕು ಹೆಚ್ಚಿಸುವ ಗಂಗಾರತಿ ಕಾರ್ಯಕ್ರಮ ನೋಡಿಕೊಂಡು ಬಂದು ಅದೇ ಮಾದರಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಆರತಿ ಮಾಡಲು ಮುಂದಾಗಿರುವುದನ್ನು ಪತ್ರಿಕೆಗಳಲ್ಲಿ ನೋಡಿ ಆಘಾತವಾಗಿದೆ, ಅಂತಹ ಕಾರ್ಯಕ್ರಮವನ್ನು ಮಂಡ್ಯದಲ್ಲಿ ನಡೆಸುವುದನ್ನು ಕೈಬಿಡಬೇಕೆಂದು ಮಂಡ್ಯ ಜಿಲ್ಲಾಡಳಿತ ದ್ರಾವಿಡ ಕನ್ನಡಿಗರು ಹನಕೆರೆ ಅಭಿಗೌಡ ಸೇರಿದಂತೆ ಹಲವರು ಸೋಮವಾರ ಮನವಿ ಸಲ್ಲಿಸಿದರು.

ವಿಶ್ವ ಮಾನವ ಕುವೆಂಪು ಅವರು ಹೇಳಿದಂತೆ, “ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?,  “ಗಂಗಾ ಮಾತ್ರ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಪವಿತ್ರ ಅಲ್ಲವೇ?” ಎಂಬ ಸಾಲುಗಳನ್ನು ಉಲ್ಲೇಖಿಸಿರುವ ದ್ರಾವಿಡ ಕನ್ನಡಿಗರು, ಈಗಾಗಲೇ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆಯಿಂದ ಕನ್ನಡನಾಡು ನುಡಿ ಆಚರಣೆಗಳಿಗೆ ಅವಕಾಶ ಕೊಡದೆ, ನಾರ್ತ್ ಇಂಡಿಯಾದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಈಗಿವಾಗ, ಕರ್ನಾಟಕ ಸರ್ಕಾರ ಕೂಡ ನಾರ್ತ್ ಇಂಡಿಯಾದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಹಣ ವ್ಯಯಿಸುವುದು ತಪ್ಪು ನಡೆಯಾಗಿದೆ ಎಂದು ಅವರು ಹೇಳಿದ್ದಾರೆ

ಆರತಿ ನಡವಳಿಕೆಯನ್ನು ಕೈ ಬಿಟ್ಟು ಅದರ ಬದಲಿಗೆ ಕಾವೇರಿ ನದಿ ತೀರದಲ್ಲಿ ಪ್ರತಿ ದಸರಾ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳ ಕರೆಯಿಸಿ ಬಸವಣ್ಣನವರ ವಚನಗಳ ಸಮಾಲೋಚನೆ ಕಾರ್ಯಕ್ರಮ ನಡೆಸಬೇಕು ಇದರ ಮೂಲಕ ಅಸ್ಪೃಶ್ಯತೆ, ಜಾತಿ ಅಸಮಾನತೆ ಮತ್ತು ನದಿ ನೀರನ್ನು ಕಲುಷಿತಗೊಳಿಸುವಿಕೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ಧಾರೆ.

ಶ್ರೀರಂಗಪಟ್ಟಣ ದಸರಾದಲ್ಲಿ ಹಿಂದಿ ಕಾರ್ಯಕ್ರಮ ಬೇಡ

ಈಗಾಗಲೇ ನಾರ್ತ್ ಇಂಡಿಯಾದವರ ಅಪಾರ ವಲಸೆಯಿಂದ ಸ್ಥಳಿಯರಾದ ಕನ್ನಡದವರಿಗೆ ಅವಕಾಶ ಸಿಗದೆ ಪೇಚಾಡುವಂತಾಗಿರುವುದರಿಂದ ಶ್ರೀರಂಗಪಟ್ಟಣ ದಸರಾದಲ್ಲಿ ಯಾವ ಕಾರಣಕ್ಕೂ ಹಿಂದಿ ಭಾಷೆಗೆ, ಹಿಂದಿ ಕಲಾವಿದರಿಗೆ, ಹಿಂದಿ ಗುತ್ತಿಗೆದಾರರಿಗೆ ಮತ್ತು ಹಿಂದಿ ಕೆಲಸದವರಿಗೆ ಅವಕಾಶ ಕೊಡಬಾರದು. ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ಮತ್ತು ಶ್ರೀರಂಗಪಟ್ಟಣ ದಸರಾದಲ್ಲಿ ಹಿಂದಿ ಭಾಷೆಗೆ ಅವಕಾಶ ಕೊಡಲು ಮುಂದಾದಲ್ಲಿ ಕರ್ನಾಟಕ ಸರ್ಕಾರ ಮುಜುಗರಕ್ಕೆ ಈಡಾಗುವಂತೆ ನಿರಂತರ ಪ್ರತಿಭಟನೆ ದಾಖಲಿಸುತ್ತೇವೆಂದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕಿ ರೋಹಿಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ರಾಜೇಂದ್ರ ಸಿಂಗ್ ಬಾಬು, ಮದ್ದೂರು ಧನುಷ್ ಗೌಡ, ಕರವೇ ಮುಖಂಡ ಜಯರಾಂ ಹೊಸೂರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!