ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೨೪ ಎಕರೆಗೂ ಹೆಚ್ಚಿನ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ನಿರಾಸಕ್ತಿ ತೋರುತ್ತಿದೆ ಇದರಿಂದಾಗಿ ಅಸಿಟೇಟ್ ಕಾರ್ಖಾನೆಗೆ ಸೇರಿದ ೧೨೫ ಎಕರೆ ಭೂಮಿ ಖಾಸಗಿಯವರ ಪಾಲಾದಂತೆ ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯು ಖಾಸಗಿ ಒತ್ತುವರಿದಾರರ ಪಾಲಾಗುವ ಆತಂಕವಿದೆ ಎಂದು ಕರುನಾಡ ಸೇವಕರು ಸಂಘಟನೆಯ ಮುಖಂಡ ನಾಗಣ್ಣಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯಲ್ಲಿ ತಮಿಳು ಕಾಲೋನಿ ಸೇರಿದಂತೆ ಹಲವರು ಒತ್ತುವರಿ ಮಾಡಿಕೊಂಡಿದ್ದು ಈ ಭೂಮಿಯನ್ನು ಮೆಡಿಕಲ್ ಕಾಲೇಜು ವಶಕ್ಕೆ ನೀಡುವಂತೆ ಕಳೆದ ಜುಲೈ ೧ ರಂದು ಕನ್ನಡಪರ ಹಾಗೂ ರೈತ ಸಂಘಟನೆಗಳು ಬೈಕ್ ರಾಲಿ ನಡೆಸಿದ್ದವು. ಹೋರಾಟಕ್ಕೆ ಮಣಿದ ಜಿಲ್ಲಾಧಿಕಾರಿಗಳು. ಉಪವಿಭಾಗಾಧಿಕಾರಿ ತಹಶೀಲ್ದಾರರು ನಗರಸಭೆ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳ ಉನ್ನತ ಸಮಿತಿ ರಚಿಸಿ ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯ ಸರ್ವೇ ನಡೆಸಿ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸುವ ಹಾಗೂ ಹೈಕೋರ್ಟ್ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಆದೇಶಿಸಲಾಗಿತ್ತು. ಆದರೆ ಸಮಿತಿ ರಚಿಸಿ ಒಂದು ತಿಂಗಳು ಕಳೆದರೂ ಈ ಸಮಿತಿ ಯಾವುದೆ ರೀತಿಯಲ್ಲೂ ಒತ್ತುವರಿ ತೆರವು ಸಂಬಂದ ಯಾವುದೆ ಚಟುವಟಿಕೆ ನಡೆಸದೆ ನಿಷ್ಕ್ರಿಯವಾಗುವ ಮೂಲಕ ಒತ್ತುವರಿ ತೆರವಿಗೆ ಜಿಲ್ಲಾಡಳಿತಕ್ಕೆ ಯಾವುದೆ ಇಚ್ಚಾಶಕ್ತಿ ಇಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದು ದೂರಿದರು.
ಮೆಡಿಕಲ್ ಕಾಲೇಜು ನಿರ್ದೇಶಕರು ನ್ಯಾಯಾಲಯದಲ್ಲಿ ಸೂಕ್ತ ವಕೀಲರ ಮೂಲಕ ನ್ಯಾಯಾಂಗ ಪ್ರಕ್ರಿಯೆ ನಡೆಸಿ ಕಾಲೇಜಿಗೆ ಸೇರಿದ ಭೂಮಿ ವಶಕ್ಕೆ ಪಡೆಯುವಲ್ಲಿ ವಿಫಲವಾಗಿವೆ. ಕಳೆದ ಎರಡು ವರ್ಷಗಳಿಂದ ಒಂದು ತಡೆಯಾಜ್ಞೆ ತೆರವುಗೊಳಿಸಲು ಸಾಧ್ಯವಾಗದಿರುವುದು ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳಿಗೆ ಜಿಲ್ಲೆಯ ಲಕ್ಷಾಂತರ ಜನರ ಹಿತಾಸಕ್ತಿಗಿಂತ ಕೆಲವೆ ಸಾವಿರ ಮತಗಳ ಓಟ್ ಬ್ಯಾಂಕ್ ಮೇಲೆ ಹೆಚ್ಚು ಆಸಕ್ತಿ ಎಂಬುದು ಧೃಡಪಡಿಸಿದೆ ಎಂದರು.
ಒತ್ತುವರಿ ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯಿಂದಾಗಿ ಮಂಡ್ಯದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ.ಟ್ರಾಮಾಕೇರ್ ಸ್ಥಾಪನೆ ಕನಸಾಗಿಯೆ ಉಳಿಯಲಿದೆ. ಇದಕ್ಕೆ ಜಿಲ್ಲೆಯ ಜನತೆ ಯಾವುದೆ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು.ಈ ನಿಟ್ಟಿನಲ್ಲಿ ಆಗಸ್ಟ್ 15ರಿಂದ ಎರಡನೇ ಹಂತದ ಜಾಗೃತಿ ಜಾಥವನ್ನು ಆರಂಭಿಸಲಾಗುವುದು. ಈ ಜಾಥದಲ್ಲಿ ಜಿಲ್ಲಾಡಳಿತದ ನಿರಾಶಕ್ತಿ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ ಸಂಬಂದ ಮಂಡ್ಯ ಜಿಲ್ಲೆಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಚಾರ ನಡೆಸಲಾಗುವುದು ಎಂದರು.
ಗೋಷ್ಟಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ, ಕರ್ನಾಟಕ ರಾಷ್ಡ ಸಮಿತಿ ಪಕ್ಷದ ಉಪಾಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ರೈತಸಂಘದ ತಾಲ್ಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಉಪಸ್ಥಿತರಿದ್ದರು.




