ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ಮಂಗಲದ ಟಿ ಸತೀಶ್ ಜವರೇಗೌಡ (ಸಜಗೌ) ಅವರ ‘ಜೀವನ್ಮುಖಿ’ ಕವನ ಸಂಕಲನದಲ್ಲಿನ ‘ಅಪ್ಪ’ ಕವನವು ವಿಜಯನಗರ ಜಿಲ್ಲೆಯಲ್ಲಿರುವ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ತರಗತಿಗಳ ಪಠ್ಯಪುಸ್ತಕಕ್ಕೆ ಆಯ್ಕೆ ಆಗಿದೆ.
ರಾಜ್ಯ ಶಿಕ್ಷಣ ನೀತಿಯ ಅಡಿಯಲ್ಲಿ ಸಿದ್ಧಪಡಿಸಿರುವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಬಿ.ಎಸ್ಸಿ., ಬಿ.ಎಸ್ಸಿ(ಜಿ.ಎಂ.ಟಿ.), ಮತ್ತು ಬಿಸಿಎ ಪದವಿ ತರಗತಿಗಳ ನಾಲ್ಕನೆಯ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯಪುಸ್ತಕವಾದ ‘ವಿಜ್ಞಾನ ಸೌರಭ’ಕ್ಕೆ ‘ಅಪ್ಪ’ ಕವನ ಸೇರ್ಪಡೆಯಾಗಿ ಸ್ಥಾನ ಪಡೆದಿದೆ.
ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷರಾಗಿರುವ ಟಿ. ಸತೀಶ್ ಜವರೇಗೌಡ ಅವರು ಮಂಡ್ಯ ಮಾತ್ರವಲ್ಲದೆ, ನಾಡಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ‘ಸಜಗೌ’ ಎಂಬ ಕಾವ್ಯನಾಮದಲ್ಲಿ ಜೀವನ್ಮುಖಿ, ಸಂಜೆ ಮಳೆ, ಹೊಳೆ ಜಂಗಮನ ಜೋಳಿಗೆ, ಗಾಳಿಪಟ, ಕುಹೂ ಕುಹೂ ಕೋಗಿಲೆ, ದಿವ್ಯ ದೀವಿಗೆ ಕವನ ಸಂಕಲನಗಳನ್ನು ರಚಿಸಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಉಪಾಧ್ಯಕ್ಷ, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಮತ್ತು ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿಯಾಗಿಯೂ ಕನ್ನಡ ಪರವಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸತೀಶ್ ಜವರೇಗೌಡ ಅವರು ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳ ಬಿ.ಎಸ್ಸಿ., ಬಿಎಸ್ಸಿ (ಜಿ.ಎಂ.ಟಿ.), ಬಿಸಿಎ ನಾಲ್ಕನೆಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮುಂದಿನ ಮೂರು ವರ್ಷಗಳ ಶೈಕ್ಷಣಿಕ ಅವಧಿಯವರೆಗೂ ಈ ‘ಅಪ್ಪ’ ಕವನ ಪಠ್ಯವಾಗಿ ಬೋಧಿಸಲ್ಪಡಲಿದೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕ ಮತ್ತು ಪ್ರವೃತ್ತಿಯಲ್ಲಿ ಸೃಜನಶೀಲ ಪ್ರತಿಭಾವಂತ ಕವಿಯಾಗಿರುಗಿರುವ ಟಿ. ಸತೀಶ್ ಜವರೇಗೌಡ ಅವರ ಕವನವು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಇತ್ತೀಚಿಗಷ್ಟೇ ಸತೀಶ್ ಜವರೇಗೌಡರ ‘ಬೆಳಕಿಗೂ ಶೋಕದ ಗ್ರಹಣ’ ಎಂಬ ಕವನವು ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಬಿ.ಎಸ್ಸಿ. ಪದವಿಯ ತೃತೀಯ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯಪುಸ್ತಕದ ‘ವಿಜ್ಞಾನ ಸೌರಭ’ಕ್ಕೆ ಆಯ್ಕೆಯಾಗಿದ್ದು, ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳ ಬಿ.ಎಸ್ಸಿ.ಯ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ೨೦೨೫ ರಿಂದ ೨೦೧೮ ರ ಶೈಕ್ಷಣಿಕ ವರ್ಷದವರೆಗೂ ಬೋಧಿಸಲ್ಪಡುತ್ತಿರುವುದನ್ನ ಸ್ಮರಿಸಬಹುದು.




